ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟ: ಇನ್ನೂ ಚಾಲನೆ ಪಡೆಯದ ಆಡಳಿತ ಯಂತ್ರ

ಬೆಂಗಳೂರು, ಮೇ 29- ರಾಜ್ಯದಲ್ಲಿ ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ 15 ದಿನ ಕಳೆಯುತ್ತಾ ಬಂದಿದೆ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬಾರದ ಹಿನ್ನೆಲೆ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದು, ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟದಿಂದಾಗಿ ಆಡಳಿತ ಯಂತ್ರ ಇನ್ನೂ ಚಾಲನೆ ಪಡೆದಿಲ್ಲ.

ಬಹುಮತ ಇರದಿದ್ದರೂ ಬಿಜೆಪಿ ಪಕ್ಷ ಸರ್ಕಾರ ರಚನೆಗೆ ಮುಂದಾಗಿ ಆರಂಭದ ಐದು ದಿನಗಳನ್ನು ತಿಂದು ಹಾಕಿದರೆ, ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆ ಕಸರತ್ತು, ಇದೀಗ ಸಚಿವ ಸಂಪುಟ ರಚನೆಯ ಬಿಕ್ಕಟ್ಟು ನಡುವೆ 10 ದಿನ ಮತ್ತೆ ವ್ಯರ್ಥವಾಗಿದೆ. ಅದಾಗಲೇ ಚುನಾವಣೆ ಪ್ರಕ್ರಿಯೆ, ಪ್ರಚಾರ ಇತ್ಯಾದಿ ಕಾರಣಗಳಿಂದ ರಾಜ್ಯದ ಆಡಳಿತ ಯಂತ್ರ ಸ್ಥಗಿತಗೊಂಡು ಎರಡು ತಿಂಗಳಾಗುತ್ತಾ ಬಂದಿದೆ. ಜನರ ಸಮಸ್ಯೆ ಬಗ್ಗೆ ಕೇಳುವವರಿಲ್ಲ.

ವಿವಿಧೆಡೆ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿವೆ, ಜನ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಮುಂಗಾರು ಪೂರ್ವ ಮಳೆ ರಾಜ್ಯದ ಹಲವೆಡೆ ಆಗಿದ್ದು, ರೈತರು ಕೃಷಿ ಚಟುವಟಿಕೆ ಆರಂಭಿಸುವ ಉತ್ಸಾಹದಲ್ಲಿದ್ದಾರೆ. ಆದರೆ ರೈತರ ಕೃಷಿ ಚಟುವಟಿಕೆ ಆರಂಭಕ್ಕೆ ಪೂರಕವಾಗಿ ಸವಲತ್ತುಗಳನ್ನು ಒದಗಿಸಬೇಕಿರುವ ಸರ್ಕಾರವೇ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ಮಂಡಿಯೂರಿ ಕುಳಿತಿದೆ.

ಸಚಿವ ಸಂಪುಟ ಕಸರತ್ತು:
ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್- ಜೆಡಿಎಸ್ ಸೇರಿ ಅಧಿಕಾರಕ್ಕೆ ಬಂದಿದ್ದು, ಸಿಎಂ, ಡಿಸಿಎಂ ಮಾತ್ರ ಪದಗ್ರಹಣ ಮಾಡಿದ್ದಾರೆ. ಉಳಿದ ಸಚಿವ ಸಂಪುಟ ರಚನೆ ಇನ್ನೇನು ಆಗಬೇಕಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಪಕ್ಷದ ನಾಯಕರಿಗೆ ಇದು ದೊಡ್ಡ ತಲೆಬಿಸಿಯಾಗಿ ಪರಿಣಮಿಸಿದೆ. ಇದೀಗ ಸಚಿವರ ಪಟ್ಟಿ ಅಂತಿಮಗೊಳಿಸುವ ಜವಾಬ್ದಾರಿ ಹೈಕಮಾಂಡ್ ಅಂಗಳ ತಲುಪಿದೆ. ದೆಹಲಿಯಲ್ಲಿ ಕೈ ಶಾಸಕರು ಸುಮಾರು 30ಕ್ಕೂ ಹೆಚ್ಚು ಮಂದಿ ಬೀಡು ಬಿಟ್ಟಿದ್ದಾರೆ. ಅದರ ಹೊರತಾಗಿಯೂ ಸಚಿವ ಸ್ಥಾನದ ಖಾತರಿ ಇರುವ ಹಲವು ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನೆಮ್ಮದಿಯಾಗಿ ಕುಳಿತಿದ್ದಾರೆ.

ಸಚಿವರಾಗುವ ಭರವಸೆಯೊಂದಿಗೆ ಗೆದ್ದ 13 ದಿನಗಳ ನಂತರ ಇಂದು ಕ್ಷೇತ್ರಕ್ಕೆ ತೆರಳುತ್ತಿದ್ದ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ನಿನ್ನೆ ದಿಲ್ಲಿಯಿಂದ ಅವರು ಸಚಿವರಾಗುವ ಭರವಸೆ ಪಡೆದು ವಾಪಸಾಗುತ್ತಿದ್ದರು ಎನ್ನಲಾಗಿದೆ. ಇವರ ನಿಧನದಿಂದ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 77 ಆಗಿದ್ದು, ಇವರಲ್ಲಿ ಕನಿಷ್ಠ 40ಕ್ಕೂ ಹೆಚ್ಚು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸದ್ಯ ಸಚಿವ ಸಂಪುಟದಲ್ಲಿ 24 ಕಾಂಗ್ರೆಸ್ ಹಾಗೂ 12 ಜೆಡಿಎಸ್ ಶಾಸಕರಿಗೆ ಅವಕಾಶ ನೀಡುವ ಸಂಬಂಧ ಮಾತುಕತೆ ಆಗಿದೆ. ಜೆಡಿಎಸ್ ಹೈಕಮಾಂಡ್ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಆಗಿದ್ದರಿಂದ, ಬೆಂಗಳೂರಿನಲ್ಲಿಯೇ ಪಟ್ಟಿ ಅಂತಿಮವಾಗಿದೆ. ಆದರೆ ಕೈ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ.

ಕಾಂಗ್ರೆಸ್ ಸಚಿವರ ಪಟ್ಟಿ ಅಂತಿಮಗೊಳಿಸಬೇಕಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿನ್ನೆ ರಾತ್ರಿಯೇ ಅಮೆರಿಕಗೆ ತಾಯಿ ಸೋನಿಯಾಗಾಂಧಿ ಅವರೊಂದಿಗೆ ತೆರಳಿದ್ದಾರೆ. ಅವರು ವಾಪಸಾಗಲು ಇನ್ನೊಂದು ವಾರ ಬೇಕು. ಅಲ್ಲಿಯವರೆಗೂ ರಾಜ್ಯದ ಆಡಳಿತ ಯಂತ್ರ ಸ್ಥಗಿತಗೊಂಡೇ ಇರಲಿದೆ. ರಾಜ್ಯದಲ್ಲಿ ರಾಜಕೀಯ ಪಕ್ಷಗಳನ್ನು ಮಾತ್ರ ಜನ ಅತಂತ್ರ ಮಾಡಿಲ್ಲ, ಬದಲಾಗಿ ಜನಜೀವನವನ್ನೇ ಅತಂತ್ರವಾಗಿಸಿರುವುದು ಈಗ ಗಮನಕ್ಕೆ ಬರುತ್ತಿದೆ.

ರಾಜ್ಯ ಸರ್ಕಾರದಿಂದ ಸಿಗಬೇಕಿದ್ದ ಹಲವು ಸೌಲಭ್ಯಗಳು ವಂಚಿತವಾಗಿದೆ. ಸರ್ಕಾರಿ ನೌಕರರ ವೇತನ ವಿಳಂಬವಾಗಿದೆ, ಬಡ್ತಿ ತಡೆಯಲಾಗಿದೆ, ರೈತರಿಗೆ ಸಿಗಬೇಕಾದ ಸವಲತ್ತು ಸಮರ್ಪಕವಾಗಿ ದೊರಕುತ್ತಿಲ್ಲ, ಭಾಗ್ಯಗಳ ಸ್ಥಿತಿ ದುರ್ಭಾಗ್ಯವಾಗಿದೆ. ಒಟ್ಟಾರೆ ಇಡೀ ರಾಜ್ಯವೇ ನಿಂತ ನೀರಿನಂತಾಗಿದ್ದು, ರಾಜಕೀಯ ಅಸ್ಥಿರತೆ ಯಾವಾಗ ಕೊನೆಗೊಳ್ಳುತ್ತದೆಯೋ ಅಲ್ಲಿಯವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ