ನವದೆಹಲಿ, ಮೇ 29- ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಬ್ಯಾಂಕ್ಗಳ ಸಂಘ (ಐಬಿಎ) ನಾಳೆಯಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬ್ಯಾಂಕ್ ಮತ್ತು ಎಟಿಎಂ ವಹಿವಾಟು ವ್ಯತ್ಯಯವಾಗಲಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಲಿದೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ಮತ್ತು ನಾಡಿದ್ದು (ಮೇ 30 ಮತ್ತು 31) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬ್ಯಾಂಕ್ಗಳು ಕರೆ ನೀಡಿವೆ. ಈ ಮುಷ್ಕರಕ್ಕೆ ಎಟಿಎಂ ಸಿಬ್ಬಂದಿ ಸಹ ಕೈ ಜೋಡಿಸಿರುವುದರಿಂದ ದೇಶಾದ್ಯಂತ ಆರ್ಥಿಕ ವ್ಯವಹಾರ ಮತ್ತು ವೇತನ ಪಾವತಿಗೆ ತೀವ್ರ ಧಕ್ಕೆಯಾಗಲಿದೆ.
ಬಹುತೇಕ ಸಂಸ್ಥೆಗಳು ಮಾಸಾಂತ್ಯಕ್ಕೆ ವೇತನ ಪಾವತಿ ಮಾಡುವುದು ವಾಡಿಕೆ. ಆದರೆ, ನಾಳೆ ಮತ್ತು ನಾಡಿದ್ದು ಮುಷ್ಕರವಿರುವ ಕಾರಣ ಬಟವಾಡೆಯಲ್ಲಿ ವ್ಯತ್ಯಯವಾಗಿ ವೇತನ ವರ್ಗದ ಉದ್ಯೋಗಿಗಳು ತೀವ್ರ ಬವಣೆಗೆ ಒಳಗಾಗಲಿದ್ದಾರೆ. ಅಲ್ಲದೆ, ಸಾರ್ವಜನಿಕರಿಗೂ ಸಹ ಮುಷ್ಕರದ ಬಿಸಿ ತಟ್ಟಲಿದೆ.
ಬ್ಯಾಂಕ್ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ರಾಜ್ಯ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಸಹ ಬೆಂಬಲ ನೀಡಿವೆ. ಜತೆಗೆ ಎಟಿಎಂಗಳು ಕೂಡ ಬಂದ್ ಆಗಲಿವೆ. ಇವೆಲ್ಲದರ ಒಟ್ಟು ಪರಿಣಾಮ ಎರಡು ದಿನಗಳ ಕಾಲ ಸಾರ್ವಜನಿಕರಿಗೆ ತಟ್ಟಲಿದ್ದು, ಹಣಕಾಸು ವ್ಯವಹಾರ ಡೋಲಾಯಮಾನವಾಗಲಿದೆ.
ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆದ ಸಭೆಗಳು ವಿಫಲವಾದ ಹಿನ್ನೆಲೆಯಲ್ಲಿ ಎರಡು ದಿನಗಳ ಬಂದ್ಗೆ ಐಬಿಎ ಕರೆ ನೀಡಿದೆ. ಈಗಾಗಲೇ ರಾಜ್ಯದ ಹಲವೆಡೆ ಎಟಿಎಂಗಳ ಬಳಿ ನೋ ಕ್ಯಾಷ್ ಬೋರ್ಡ್ಗಳು ನೇತಾಡುತ್ತಿದ್ದು, ಇನ್ನೂ ಒಂದು ವಾರ ಕಾಲ ಜನತೆ ಹಣಕ್ಕಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.