
ಹೊಸದಿಲ್ಲಿ,ಮೇ 29
ಮೇ.30 ಹಾಗೂ 31 ರಂದು ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡಚಣೆ ಉಂಟಾಗಲಿದೆ.
ಎಟಿಎಂ ಹಾಗೂ ವೇತನ ವಿತ್ ಡ್ರಾ ಮಾಡುವುದರ ಮೇಲೆಯೂ ಬ್ಯಾಂಕ್ ನೌಕರರ ಪ್ರತಿಭಟನೆ ಪರಿಣಾಮ ಬೀರಲಿದ್ದು, ಆನ್ ಲೈನ್ ವಹಿವಾಟನ್ನೇ ಗ್ರಾಹಕರು 2 ದಿನಗಳ ಕಾಲ ನೆಚ್ಚಿಕೊಂಡಿರಬೇಕಾಗುತ್ತದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಅತ್ಯಲ್ಪ ಶೇ.2 ರಷ್ಟು ವೇತನ ಏರಿಕೆ ಮಾಡುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಮೇ.5 ರಂದು ಬ್ಯಾಂಕ್ ನೌಕರರೊಂದಿಗೆ ಐಬಿಎ ಮಾತುಕತೆ ನಡೆಸಿತ್ತು. ಈ ಸಭೆಯಲ್ಲಿ ಶೇ.2 ರಷ್ಟು ವೇತನ ಹೆಚ್ಚು ಮಾಡುವುದಾಗಿ ತಿಳಿಸಿತ್ತು. ಮತ್ತೊಂದು ಮೂಲಗಳ ಪ್ರಕಾರ ಎಟಿಎಂ ಗಾರ್ಡ್ ಗಳೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಎಟಿಎಂ ಗಳಲ್ಲಿ ಕ್ಯಾಶ್ ವಿತ್ ಡ್ರಾ ಮಾಡುವುದಕ್ಕೆ ಸಮಸ್ಯೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ ನೌಕರರು, ಸಿಬ್ಬಂದಿಗಳು ಪ್ರತಿಭಟನೆ ನಡೆಸುವುದಕ್ಕೂ ಮುನ್ನ ಎಟಿಎಂ ಗಳಲ್ಲಿ ನಗದನ್ನು ತುಂಬಲಾಗುವುದು ಈ ಮೂಲಕ ಗ್ರಾಹಕರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಬ್ಯಾಂಕ್ ಗಳು ಭರವಸೆ ನೀಡಿವೆ.