ಡಿಆರ್‌ಡಿಒ ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕ

ಬೆಂಗಳೂರು:ಮೇ-29: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಹಾ ನಿರ್ದೇಶಕಿಯಾಗಿ ಟೆಸ್ಸಿ ಥಾಮಸ್ ನೇಮಕವಾಗಿದ್ದಾರೆ.

ಡಿಆರ್‌ಡಿಒ ಏರೋನಾಟಿಕಲ್ ಸಿಸ್ಟಮ್ಸ್ ವಿಭಾಗದ ಮಹಾ ನಿರ್ದೇಶಕ ಡಾ.ಸಿ.ಪಿ. ರಾಮನಾರಾಯಣನ್ ಅವರು ಮೇ 31ರಂದು ನಿವೃತ್ತಿ ಹೊಂದಲಿದ್ದು, ಆ ಸ್ಥಾನಕ್ಕೆ ಟೆಸ್ಸಿ ಥಾಮಸ್ ನೇಮಕ ಮಾಡಲಾಗಿದೆ. ಜೂನ್ 1 ರಿಂದ ಟೆಸ್ಸಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಟೆಸ್ಸಿಯವರು, ಹೈದರಾಬಾದ್‍ನ ಅಡ್ವಾನ್ಸ್ಡ್ ಲ್ಯಾಬೋರೇಟರಿಸ್ (ಎಎಸ್‌ಎಲ್) ನಿರ್ದೇಶಕಿಯಾಗಿದ್ದಾರೆ. ಅಗ್ನಿ ಪುತ್ರಿ, ಕ್ಷಿಪಣಿ ಮಹಿಳೆ ಮೊದಲಾದ ಬಿರುದುಗಳ ಒಡತಿಯಾಗಿರುವ ಟೆಸ್ಸಿ ಥಾಮಸ್, ಆರಂಭದಿಂದಲೂ ಅಗ್ನಿ ಕ್ಷಿಪಣಿ ಯೋಜನೆಗಳಲ್ಲಿ ಮಹತ್ವದ ಸಾಧನೆ ಮಾಡಿದ್ದು, 1988ರಿಂದ ಅಗ್ನಿ ಕ್ಷಿಪಣಿಯ ಸರಣಿ ಯೋಜನೆಗಳಲ್ಲೆಲ್ಲಾ ಇವರು ಕೆಲಸಮಾಡಿದ್ದಾರೆ.

ಮೊದಲ ಅಗ್ನಿ ಕ್ಷಿಪಣಿ ಪ್ರಯೋಗಾರ್ಥ ಉಡಾವಣೆ ನಡೆದದ್ದು 1989ರಲ್ಲಿ. 2006ರಲ್ಲಿ 3500 ಕಿಮೀ ವ್ಯಾಪ್ತಿಯ ಅಗ್ನಿ -3 ಕ್ಷಿಪಣಿ ಯೋಜನೆಗೆ ಅವರು ಸಹಯೋಜನಾ ನಿರ್ದೇಶಕರಾಗಿದ್ದರು. ನಂತರ ಅಗ್ನಿ 4 ಕ್ಷಿಪಣಿ ಯೋಜನೆಗೆ ಅವರು ಯೋಜನಾ ನಿರ್ದೇಶಕರಾಗಿದ್ದರು. ಇವರು ಅಗ್ನಿ-5 ಕ್ಷಿಪಣಿ ಯೋಜನೆಯ ನೇತೃತ್ವ ವಹಿಸಿದ್ದರು. ಈ ಮೂಲಕ ಕ್ಷಿಪಣಿ ಯೋಜನೆಗೆ ನೇತೃತ್ವ ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಟೆಸ್ಸಿ ಡಿಆರ್‌ಡಿಒ ಮಹಾ ನಿರ್ದೇಶಕಿಯಾಗಿ ಹುದ್ದೆಗೇರಿದ ಎರಡನೇ ಮಹಿಳೆಯಾಗಿದ್ದಾರೆ. ಈ ಹಿಂದೆ ಜೆ.ಮಂಜುಳಾ ಆ ಸ್ಥಾನಕ್ಕೇರಿದ್ದರು.

ಏರೋನಾಟಿಕಲ್ ಸಿಸ್ಟಮ್ಸ್ ಡೈರೆಕ್ಟರ್ ಜನರಲ್ ಹುದ್ದೆಗೇರುವ ಮೂಲಕ ಟೆಸ್ಸಿ ಅವರು ಡಿಫೆನ್ಸ್ ಏವಿಯೋನಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‍ಮೆಂಟ್ (DARE), ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‍ಮೆಂಟ್ (GTRE) , ಸೆಂಟರ್ ಫಾರ್ ಏರ್ ಬೋನ್ ಸಿಸ್ಟಂ (CABS), ಏರೋನಾಟಿಕಲ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್ (ADE), ಸೆಂಟರ್ ಫಾರ್ ಮಿಲಿಟರಿ ಏರ್‍‍ವರ್ತಿನೆಸ್ ಆ್ಯಂಡ್ ಸರ್ಟಿಫಿಕೇಶನ್ (CEMILAC) , ಏರಿಯಲ್ ಡೆಲಿವರಿ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್ (ADRDE), ಏರೋನಾಟಿಕಲ್ ಡೆವಲಪ್‍ಮೆಂಟ್ ಏಜೆನ್ಸಿ (ADA)ಮೊದಲಾದವುಗಳ ಜವಾಬ್ದಾರಿ ವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ