ಐದು ತಿಂಗಳ ಅವಧಿಯಲ್ಲಿ ಭದ್ರತಾ ಪಡೆಗಳು 119 ನಕ್ಸಲರು ಹಾಗೂ 65 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ!

ನವದೆಹಲಿ, ಮೇ 28-ಈ ವರ್ಷ ಐದು ತಿಂಗಳ ಅವಧಿಯಲ್ಲಿ ಭದ್ರತಾ ಪಡೆಗಳು 119 ನಕ್ಸಲರು ಹಾಗೂ 65 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ-ಅಂಶಗಳಿಂದ ಈ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷದಲ್ಲಿ ಒಟ್ಟು 136 ಮಾವೋವಾದಿ ಉಗ್ರರು ಯೋಧರ ಗುಂಡಿಗೆ ಬಲಿಯಾಗಿದ್ದರೆ, ಈ ವರ್ಷ ಮೇ ಅಂತ್ಯದವರೆಗೆ 119 ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಈ ವರ್ಷ ಏಪ್ರಿಲ್ 30ರವರೆಗೆ ಭದ್ರತಾ ಯೋಧರು 48 ಮಾವೋವಾದಿ ಬಂಡುಕೋರರನ್ನು ಕೊಂದು ಹಾಕಿದ್ದಾರೆ. ಏ.22 ಮತ್ತು 23ರಂದು ಮಹಾರಾಷ್ಟ್ರದ ಗಡ್‍ಚಿರೋಲಿಯಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‍ಗಳಲ್ಲೇ 40 ನಕ್ಸಲರು ಹತರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಾಲ್ಕು ವರ್ಷಗಳ ಸರ್ಕಾರ ಪೂರೈಸಿದ ಸಂದರ್ಭದಲ್ಲಿ ಗೃಹ ಇಲಾಖೆಯ ಸಾಧನೆಗಳ ಪಟ್ಟಿ ವರದಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
ನಕ್ಸಲರ ಹಾವಳಿಯನ್ನು ಕಳೆದ ಮೂವರು ವರ್ಷಗಳಲ್ಲಿ ಗಮನಾರ್ಹವಾಗಿ ನಿಯಂತ್ರಿಸಲಾಗಿದ್ದು. ಶೇ.36ರಷ್ಟು ಕಡಿಮೆಯಾಗಿದೆ. 2010-2013ರಲ್ಲಿ ನಕ್ಸಲರ ಕಾನೂನು ಬಾಹಿರ ಚಟುವಟಿಕೆಗಳು 6,524ರಷ್ಟಿತ್ತು. ಅದು 2014-17ರಲ್ಲಿ 4,136ಕ್ಕೆ ಇಳಿದಿದೆ ಎಂದು ಸಚಿವಾಲಯದ ಅಂಕಿ-ಅಂಶ ತಿಳಿಸಿದೆ.
ಇದೇ ಅವಧಿಯಲ್ಲಿ ಮಾವೋವಾದಿಗಳ ಹಿಂಸಾಚಾರದಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳ ಸಾವು-ನೋವು ಶೇ.55.5ರಷ್ಟು ಕಡಿಮೆಯಾಗಿದೆ. ಅದು ಮೂರು ವರ್ಷಗಳಲ್ಲಿ 2,428ರಿಂದ 1,081ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ನಕ್ಸಲರನ್ನು ಕೊಂದಿರುವ ಸಂಖ್ಯೆ 445 ರಿಂದ 510ಕ್ಕೇರಿದೆ.
ಈ ವರ್ಷ ಮೇ 26ರವರೆಗೆ 65 ಉಗ್ರರನ್ನು ಯೋಧರು ಹೊಡೆದುರುಳಿಸಿದ್ಧಾರೆ. 2014 ಮತ್ತು 2017ರ ನಡುವೆ ಕಾಶ್ಮೀರದಲ್ಲಿ 619 ಭಯೋತ್ಪಾದಕರು ಹತರಾಗಿದ್ದರು. 2010-13ರಲ್ಲಿ 471 ಉಗ್ರರನ್ನು ಕೊಲ್ಲಲಾಗಿತ್ತು.
ಅತ್ಯಂತ ಕ್ರೂರ ಮತ್ತು ನಿರ್ದಯ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್(ಐಎಸ್)ಗೆ ಸೇರಿದ ಉಗ್ರರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 113 ಆತಂಕವಾದಿಗಳನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ