ಬೆಂಗಳೂರು, ಮೇ 28-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರ ಇನ್ನೂ ತೀರ್ಮಾನವಾಗಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಹಣಕಾಸು ಇಲಾಖೆಯನ್ನು ಕೇಳುತ್ತಿದ್ದಾರೆ. ಮುಂದೇನಾಗುತ್ತದೆಯೋ ಕಾದು ನೋಡೋಣ ಎಂದು ಹೇಳಿದರು.
ಉಭಯ ಪಕ್ಷಗಳ ಪ್ರಣಾಳಿಕೆ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಖಾತೆ ಹಂಚಿಕೆ ಸೇರಿದಂತೆ ಯಾವುದೇ ಪ್ರಮುಖ ವಿಚಾರದ ಬಗ್ಗೆ ಸಮ್ಮಿಶ್ರ ಸರ್ಕಾರದಲ್ಲಿ ಸ್ಪಷ್ಟವಾದ ತೀರ್ಮಾನವಾಗಿಲ್ಲ ಎಂದರು.
ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ನೀವೇ ಆಗಿ ಎಂದು ಕಾಂಗ್ರೆಸ್ನವರಿಗೆ ನಾವು ಹೇಳಿದ್ದೆವು. ಆದರೆ ಕಾಂಗ್ರೆಸ್ನವರೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂದು ಹೇಳಿದರು. ಈಗ ಹಣಕಾಸು ಖಾತೆಯನ್ನು ನಮಗೇ ಕೊಡಿ ಎಂದು ಕಾಂಗ್ರೆಸ್ನವರು ಕೇಳುತ್ತಿದ್ದಾರೆ. ರೈತರ ಸಾಲ ಮನ್ನಾ ಮಾಡಲಾಗದಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಕೇವಲ 38 ಮಂದಿ ಶಾಸಕರನ್ನು ಇಟ್ಟುಕೊಂಡು ನಾವು ಹೇಗೆ ನಿರ್ಧಾರ ಮಾಡಲು ಸಾಧ್ಯವಾಗುತ್ತದೆ.
ರಾಜ್ಯದ ಆರೂವರೆ ಕೋಟಿ ಜನರು ಕುಮಾರಸ್ವಾಮಿಗೆ ಬೆಂಬಲ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಮರ್ಜಿಯಲ್ಲಿರುವುದಾಗಿ ಕುಮಾರಸ್ವಾಮಿ ಹೇಳಿರುವುದು ನಿಜ. ಅವರು ಸನ್ನಿವೇಶದ ಶಿಶುವಾಗಿದ್ದು, ಆ ಬಗ್ಗೆ ನನಗೂ ನೋವಿದೆ ಎಂದು ಗೌಡರು ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನು ದೆಹಲಿಗೆ ಆಹ್ವಾನಿಸಿಲ್ಲ. ಪ್ರಧಾನಮಂತ್ರಿಯನ್ನು ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದಾರೆ. ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡುವುದರ ಬಗ್ಗೆ ನನಗೂ ನೋವುಂಟಾಗಿದೆ ಎಂದರು.
ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮಾಡಿದ ಭಾಷಣ ಇತಿಹಾಸದಲ್ಲೇ ಅತ್ಯಂತ ಕೆಳಮಟ್ಟದ್ದ ಭಾಷೆ ಬಳಕೆ ಮಾಡಿದ್ದು ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರು ಬಂದ್ ಬೇಕಾದರೆ ಮಾಡಿಕೊಳ್ಳಲಿ ಎಂದು ಗೌಡರು ತಿರುಗೇಟು ನೀಡಿದರು.