ನವದೆಹಲಿ, ಮೇ. 28-ರಾಜಕೀಯವಾಗಿ ನಿರ್ಣಯಕವಾಗಿರುವ ಉತ್ತರ ಪ್ರದೇಶದ ಕೈರಾನ ಸೇರಿದಂತೆ ಹತ್ತು ರಾಜ್ಯಗಳ ನಾಲ್ಕು ಲೋಕಸಭೆ ಮತ್ತು 11 ವಿಧಾನಸಭೆಗಳಿಗೆ ಇಂದು ನಡೆದ ಉಪ ಚುನಾವಣೆಯಲ್ಲಿ ಬಿರುಸಿನ ಮತದಾನವಾಗಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಚುನಾವಣೆ ಬಹುತೇಕ ಶಾಂತಿಯುತವಾಗಿತ್ತು.
ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಬಿಹಾರ, ಜಾರ್ಖಂಡ್, ನಾಗಾಲ್ಯಾಂಡ್, ಮೇಘಾಲಯ, ಕರ್ನಾಟಕ, ಕೇರಳ, ಮತ್ತು ಪಂಜಾಬ್ ಈ 10 ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ಮತದಾರರು ಬೆಳಗ್ಗೆಯಿಂದಲೇ ಮತಗಟ್ಟೆಗಳ ಬಳಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.
ಉತ್ತರ ಪ್ರದೇಶ : ಉತ್ತರ ಪ್ರದೇಶದ ಗೋರಖ್‍ಪುರ್ ಮತ್ತು ಫೂಲ್‍ಪುರ್ ಲೋಕಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಬಿಜೆಪಿಗೆ ಇಂದು ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಕೈರಾನಾ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಜಿತ್ ಸಿಂಗ್ ನೇತೃತ್ವದ ರಾಷ್ಟ್ರೀಯ ಲೋಕ ದಳ(ಆರ್‍ಎಲ್‍ಡಿ) ತಬ್ಸಮ್ ಹಸನ್ ವಿರುದ್ಧ ಬಿಜೆಪಿಯ ಮೃಗಾಂಕ್ ಸಿಂಗ್ ಕಣಕ್ಕಿಳಿಸಿದ್ದಾರೆ ಆರ್‍ಎಲ್‍ಡಿ ಅಭ್ಯರ್ಥಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಅಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿದ್ದು, ತೀವ್ರ ಸ್ಪರ್ಧೆ ನಿರೀಕ್ಷಿಸಲಾಗುತ್ತಿದೆ.
ಗೋರಖ್‍ಪುರ್ ಮತ್ತು ಫೂಲ್‍ಪುರ್ ಲೋಕಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಪಾಠ ಕಲಿತಿರುವ ಬಿಜೆಪಿ ಈ ಕ್ಷೇತ್ರದಲ್ಲಿ ಶತಾಯ-ಗತಾಯ ಗೆಲ್ಲಲೇಬೇಕೆಂಬ ಪಣ ತೊಟ್ಟಿದೆ. ಪ್ರತಿಪಕ್ಷಗಳ ಸಂಯುಕ್ತ ಅಭ್ಯರ್ಥಿ ಸ್ಪರ್ಧಿಸಿರುವುದರಿಂದ ಕೈರಾನಾ ಲೋಕಸಭಾ ಸ್ಥಾನವು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಉತ್ತರ ಪ್ರದೇಶದ ನೂರ್‍ಪುರ್ ವಿಧಾನಸಭೆಗೂ ಬಿರುಸಿನ ಮತದಾನ ನಡೆಯುತ್ತಿದೆ.
ಉಳಿದಂತೆ ಮಹಾರಾಷ್ಟ್ರದ ಪಾಲ್ಘರ್ ಹಾಗೂ ಭಾಂದಾರ-ಗೊಂಡಿಯಾ ಲೋಕಸಭಾ ಕ್ಷೇತ್ರ ಮತ್ತು ಕಡೇಗಾಂವ್ ವಿಧಾನಸಭಾ ಕ್ಷೇತ್ರ ಹಾಗೂ ನಾಗಾಲ್ಯಾಂಡ್‍ನ ನಾಗಾಲ್ಯಾಂಡ್ ಲೋಕಸಭಾ ಕ್ಷೇತ್ರಗಳಲ್ಲೂ ಉಪ ಚುನಾವಣೆಯಲ್ಲಿ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.
ಪಶ್ಚಿಮ ಬಂಗಾಳದ ಮಹೇಶ್ವಲ್, ಜಾರ್ಖಂಡ್‍ನ ಗೋವಿಯಾ-ಸಿಲ್ಲಿ, ಬಿಹಾರದ ಜೋಶಿಹಟ್, ಮೇಘಾಲಯದ ಅಂಪಟಿ, ಕೇರಳದ ಚೆಂಗನ್ನೂರು, ಕರ್ನಾಟಕದ ಆರ್.ಆರ್.ನಗರ, ಚಂಡಿಗಢದ ಶಹಾಕೋಟ್ ಹಾಗೂ ಉತ್ತರಾಖಂಡದ ತಾರಲಿ ವಿಧಾನಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನವಾಗಿದೆ.
ಮೇ 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, 2019ರ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ.