ಕೆಲ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಹೊರತುಪಡಿಸಿ ಇಂದು ನಡೆದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನೆರವೇರಿತು

 

ಬೆಂಗಳೂರು, ಮೇ 28- ಕೆಲ ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಹೊರತುಪಡಿಸಿ ಇಂದು ನಡೆದ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನೆರವೇರಿತು.
ಕ್ಷೇತ್ರದಲ್ಲಿ ಸ್ಥಾಪಿಸಲಾಗಿರುವ 421 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಯಿತು. ಆದರೆ, ಲಗ್ಗೆರೆಯ ಕೆಂಪೇಗೌಡ ನಗರ ಮತ್ತು ಎಚ್‍ಎಂಟಿ ಕಾಲೋನಿಯ ಮತಗಟ್ಟೆಗಳ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ ತಡವಾಗಿ ಆರಂಭವಾಯಿತು.
ಲಗ್ಗೆರೆಯ ನಾರಾಯಣ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ 202ರಲ್ಲಿ ಇವಿಎಂ ರಿಸೀವರ್‍ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನ 1 ಗಂಟೆ ತಡವಾಗಿ ಆರಂಭವಾಯಿತು.

ಅದೇ ರೀತಿ ಜಾಲಹಳ್ಳಿಯ ಎಚ್‍ಎಂಟಿ ಕಾಲೋನಿಯ ಆರ್ಚಿಡ್ ಇಂಟರ್‍ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನ ಮತಗಟ್ಟೆಯಲ್ಲಿ ತಾಂತ್ರಿಕ ದೋಷ ಎದುರಾದ ಹಿನ್ನೆಲೆಯಲ್ಲಿ 10 ನಿಮಿಷ ತಡವಾಗಿ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು.

ನೀರಸ ಪ್ರತಿಕ್ರಿಯೆ: ವೋಟರ್ ಐಡಿ ಅಕ್ರಮ ಸಂಗ್ರಹ ಆರೋಪದಡಿ ಮುಂದೂಡಲ್ಪಟ್ಟಿದ್ದರಿಂದ ಇಂದು ನಡೆದ ಆರ್‍ಆರ್ ನಗರ ವಿಧಾನಸದಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರು ಆಸಕ್ತಿ ತೋರದಿರುವ ಬೆಳವಣಿಗೆ ಕಂಡುಬಂತು.
421 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾದರೂ 9ಗಂಟೆವರೆಗೆ ಕೇವಲ ಶೇ.10ರಷ್ಟು ಮಾತ್ರ ಮತದಾನವಾಗಿತ್ತು. 11 ಗಂಟೆ ವೇಳೆಗೆ ಶೇ.21ರಷ್ಟು ಮತದಾನವಾದರೆ, ಮಧ್ಯಾಹ್ನದ ನಂತರ ಮತದಾನದ ಪ್ರಕ್ರಿಯೆ ಚುರುಕುಗೊಂಡಿತು.

ಹಕ್ಕು ಚಲಾಯಿಸಿದ ಗಣ್ಯರು: ಮಾಜಿ ಡಿಸಿಎಂ ಆರ್.ಅಶೋಕ್ ಅವರು ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಚಿತ್ರನಟ-ನಟಿಯರಾದ ಗಣೇಶ್, ದುನಿಯಾ ವಿಜಯ್, ಅವಿನಾಶ್, ಅಮೂಲ್ಯ, ಕ್ರಿಕೆಟ್ ಪಟು ದೊಡ್ಡ ಗಣೇಶ್ ಮತ್ತಿತರ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು.
ದೂರು ದಾಖಲು: ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಲಗ್ಗೆರೆ ವಾರ್ಡ್ ಬಿಬಿಎಂಪಿ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಅವರ ಕಾರಿನ ಚಾಲಕ ಜಗದೀಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಂದಿನಿ ಬಡಾವಣೆ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿನ್ನೆ ರಾತ್ರಿ 1 ಗಂಟೆ ಸಮಯದಲ್ಲಿ ಕಾರು ಚಾಲಕ ಜಗದೀಶ್ ಮುನೇಶ್ವರ ಬ್ಲಾಕ್ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕೆಲ ಕಿಡಿಗೇಡಿಗಳು ಕಾರನ್ನು ಪರಿಶೀಲಿಸುತ್ತಿದ್ದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದರು.
ಈ ಕುರಿತಂತೆ ಜಗದೀಶ್ ನೀಡಿರುವ ದೂರು ದಾಖಲಿಸಿಕೊಂಡಿರುವ ನಂದಿನಿ ಬಡಾವಣೆ ಪೆÇಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ