ನವದೆಹಲಿ, ಮೇ 28-ಗೊಂದಲಕ್ಕೆ ಅವಕಾಶವಿಲ್ಲದಂತೆ ಸುಗಮವಾಗಿ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯಸಭೆ ವಿರೋಧಪಕ್ಷದ ನಾಯಕ ಗುಲಾಮ್ನಬಿ ಆಜಾದ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ನಾಯಕರು ಪರಸ್ಪರ ಮಾತುಕತೆ ನಡೆಸಿ ಸಮಸ್ಯೆಗೆ ಅವಕಾಶವಿಲ್ಲದಂತೆ ಸಂಪುಟ ವಿಸ್ತರಣೆ ಮಾಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಇಂದು ಅಥವಾ ನಾಳೆಯೊಳಗೆ ಎಲ್ಲವೂ ಇತ್ಯರ್ಥವಾಗಲಿದೆ ಎಂದು ಹೇಳಿದರು.
ವಿದೇಶ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರು ದೆಹಲಿಗೆ ಮರಳಿದ ನಂತರ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದಿನಾಂಕ ನಿಗದಿಪಡಿಸಲಾಗುವುದು. ಗುಲಾಮ್ ನಬಿ ಆಜಾದ್ ಅವರೊಂದಿಗೆ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಸಂಪುಟ ಹಂಚಿಕೆ ಮಾಡಲಾಗುವುದು. ಹಣಕಾಸು ಇಲಾಖೆ ಬಗ್ಗೆ ಎರಡೂ ಪಕ್ಷಗಳ ಬೇಡಿಕೆ ಇರುವ ಬಗ್ಗೆಯೂ ರಾಹುಲ್ಗಾಂಧಿಯವರೊಂದಿಗೆ ಚರ್ಚೆ ಮಾಡಿ ಇತ್ಯರ್ಥಪಡಿಸಲಾಗುವುದು. ಒಂದೇ ಸರ್ಕಾರವಿದ್ದಾಗಲೂ ಸಂಪುಟ ವಿಸ್ತರಣೆ ಮಾಡುವಾಗ ಸಮಸ್ಯೆಗಳು ಎದುರಾಗುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿ ಸಂಪುಟ ವಿಸ್ತರಣೆಗೆ ಪೂರಕವಾಗಿ ಮಾತುಕತೆ ಮತ್ತು ಗೊಂದಲ ಕಂಡುಬರುವುದು ಸಹಜ. ಹೀಗಾಗಿ ಉಭಯ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ತಾವು ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಚುನಾವಣಾ ಪೂರ್ವದಲ್ಲಿ ಸ್ವಂತ ಬಲದ ಮೇಲೆ ಜೆಡಿಎಸ್ನ್ನು ಅಧಿಕಾರಕ್ಕೆ ತರಬೇಕೆಂಬ ಮನವಿಯನ್ನು ಜನರು ತಿರಸ್ಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕಾದರೂ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ ತಾವು ಕಾಂಗ್ರೆಸ್ನ ಮುಲಾಜಿನಲ್ಲಿರುವುದಾಗಿ ಹೇಳಿದ್ದೇ ಹೊರತು ನಾಡಿನ ಜನರಿಗೆ ಅಗೌರವ ಸಲ್ಲಿಸಲು ಅಲ್ಲ ಎಂದು ಸ್ಪಷ್ಟಪಡಿಸಿದರು.