ಹರಿದ್ವಾರ:ಮೇ-28: ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಈಗ ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಬಿಎಸ್‌ಎನ್‌ಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ ಸಂಸ್ಥೆ ‘ಸ್ವದೇಶಿ ಸಮೃದ್ಧಿ’ ಸಿಮ್ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿದೆ.
ಉತ್ತರಾಖಂಡ್‌ನ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಗುರು ರಾಮ್‌ದೇವ್ ‘ಸ್ವದೇಶಿ ಸಮೃದ್ಧಿ’ ಸಿಮ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು. ಸದ್ಯ ಈ ಸಿಮ್ ಕಾರ್ಡ್‌ಗಳು ನೌಕರರು ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದೆ.
ಮುಂದಿನದಿನಗಳಲ್ಲಿ ಈ ಸಿಮ್ ಕಾರ್ಡ್‌ಗಳ ಲಾಂಚ್ ಆದಲ್ಲಿ ಗ್ರಾಹಕರು ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ವಿನಾಯಿತಿ ದೊರೆಯಲಿದೆ. ‘ಸ್ವದೇಶಿ ಸಮೃದ್ಧಿ’ ಸಿಮ್ ಬಳಕೆದಾರರು ಕೇವಲ 144 ರೂಪಾಯಿ ರಿಚಾರ್ಜ್ ಮಾಡಿಸಿದರೆ, ದೇಶಾದ್ಯಂತ ಉಚಿತ ಕರೆಗಳು, 2 ಜಿಬಿ ಡೇಟಾ ಮತ್ತು 100 ಎಸ್‌ಎಮ್‌ಎಸ್‌ಗಳ ಲಾಭ ಪಡೆಯಬಹುದು.
ವಿಶೇಷವೆಂದರೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆ ಸಹ ‘ಸ್ವದೇಶಿ ಸಮೃದ್ಧಿ’ ಸಿಮ್ ಗ್ರಾಹಕರಿಗೆ ದೊರೆಯಲಿದೆ. ಕಾರ್ಯುಕ್ರಮದಲ್ಲಿ ಮಾತನಾಡಿದ ಬಾಬಾ ರಾಮ್‌ದೇವ್ ಬಿಎಸ್‌ಎನ್‌ಎಲ್ ಸ್ವದೇಶಿ ನೆಟ್‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್ ಮತ್ತು ಪತಂಜಲಿ ಎರಡೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದಿದ್ದಾರೆ.
ಶೀಘ್ರದಲ್ಲೇ ಬಿಎಸ್‌ಎನ್‌ಎಲ್‌ನ ಐದು ಲಕ್ಷ ಕೌಂಟರ್‌ಗಳಲ್ಲಿ ‘ಸ್ವದೇಶಿ ಸಮೃದ್ಧಿ’ ಸಿಮ್ ಅನ್ನು ಜನತೆ ಪಡೆಯಹುದು. ಆಕರ್ಷಕ ಡೇಟಾ ಮತ್ತು ಕಾಲ್ ಪ್ಯಾಕೇಜ್‌ಗಳನ್ನು ನೀಡಲಾಗಿದೆ. ಅಲ್ಲದೇ, ನಮ್ಮ ಸಿಮ್ 2.5 ಲಕ್ಷ ಮತ್ತು 5 ಲಕ್ಷ ರೂಪಾಯಿಗಳ ವೈದ್ಯಕೀಯ, ಜೀವ ವಿಮೆಯನ್ನು ಹೊಂದಿದೆ ಎಂದು ರಾಮ್‌ದೇವ್ ವಿವರಿಸಿದ್ದಾರೆ.