ನೂತನ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಪ್ರವೀಣ್ ತೊಗಾಡಿಯಾ

ವಡೋದರ:ಮೇ-28: ಜೂ.24 ರಂದು ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ವಿಶ್ವಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಘೋಷಿಸಿದ್ದಾರೆ.

ಪತ್ರಕರ್ತರಿಗೆ ಸ್ವತಃ ತೊಗಾಡಿಯಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜೂ.24 ರಂದು ತಮ್ಮದೇ ಆದ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ವಡೋದರಾದಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಪ್ರವೀಣ್ ತೊಗಾಡಿಯಾ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸದೇ ಹಿಂದೆ ಸರಿದಿದ್ದಾರೆ. ಜನರ ಆಶೋತ್ತರಗಳನ್ನು ಬಿಜೆಪಿ ಪೂರ್ಣಗೊಳಿಸಿಲ್ಲ. ಆರ್ ಎಸ್ ಎಸ್ ಹಾಗೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಬೃಹತ್ ಸಂಖ್ಯೆಯ ಜನರು ಭ್ರಮನಿರಸನಗೊಂಡಿದ್ದಾರೆ ಎಂದು ಗುಡುಗಿದ್ದಾರೆ.

ಚುನಾವಣೆಗೂ ಮುನ್ನ ಕನಸುಗಳನ್ನು ಬಿತ್ತುವುದಷ್ಟೇ ಸಾಕಾಗುವುದಿಲ್ಲ, ಭರವಸೆಗಳನ್ನು ಈಡೇರಿಸುವುದೇ ದೇಶ ಕಟ್ಟುವುದಕ್ಕೆ ಆಧಾರವಾಗಿದೆ ಎಂದು ತೊಗಾಡಿಯಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೈದ್ಧಾಂತಿಕ, ಸಾಮಾಜಿಕ-ರಾಜಕೀಯ, ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಏನನ್ನೂ ಮಾಡಿಲ್ಲ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುತ್ತಿರುವವರಿಗೆ ನೋವುಂಟಾಗಿದೆ ಎಂದು ತೊಗಾಡಿಯಾ ಆರೋಪಿಸಿದ್ದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಕ್ಕೆ ಸಂಸತ್ ನಲ್ಲಿ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ