ರಿಯೊ-ಡಿ-ಜನೈರೊ, ಮೇ 27-ಬ್ರೆಜಿಲ್ ಬಂದೀಖಾನೆಯೊಂದರಲ್ಲಿ ಮತ್ತೊಂದು ಹತ್ಯಾಕಾಂಡ ನಡೆದಿದೆ. ಗೊಯಿಯಾನಿಯಾ ನಗರದಲ್ಲಿರುವ ಬಾಲಾಪರಾಧಿಗಳ ಜೈಲಿನಲ್ಲಿ ಗಲಭೆ ವೇಳೆ ಕೆಲವು ದುಷ್ಕರ್ಮಿಗಳು ಹಾಸಿಗೆಗಳಿಗೆ ಬೆಂಕಿ ಹಚ್ಚಿದ್ದರಿಂದ ಒಂಭತ್ತು ಅಪ್ರಾಪ್ರ ಕೈದಿಗಳು ಸಜೀವ ದಹನಗೊಂಡರು.
ಈ ಸೆರೆಮನೆಯಲ್ಲಿ 13 ರಿಂದ 17 ವರ್ಷಗಳ ಬಾಲಾಪರಾಧಿಗಳನ್ನು ಇರಿಸಲಾಗಿತ್ತು. ಕೆಲವು ಸೆರೆಯಾಳುಗಳನ್ನು ಒಂದು ಸೆಲ್ನಿಂದ ಇನ್ನೊಂದು ಬ್ಯಾರಕ್ಗೆ ಸ್ಥಳಾಂತರಿಸಲು ಯತ್ನಿಸುತ್ತಿದ್ದಾಗ ಗಲಭೆ ನಡೆಯಿತು. ಈ ಸಂದರ್ಭದಲ್ಲಿ ಕೆಲವು ಬಾಲಾಪರಾಧಿಗಳು ನೆಲಹಾಸು ಕಂಬಳಿಗೆ ಬೆಂಕಿ ಹಚ್ಚಿದರು. ಅಗ್ನಿಯ ಕೆನ್ನಾಲಿಗೆ ವ್ಯಾಪಿಸಿ ಒಂಭತ್ತು ಬಾಲಾಪರಾಧಗಳು ಜೀವಂತ ದಹನಗೊಂಡರು. ಈ ಘಟನೆಯಲ್ಲಿ ಜೈಲಿನ ಸಿಬ್ಬಂದಿ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ.
ಈ ಕಾರಾಗೃಹದ ಸಾಮಥ್ರ್ಯ 50ರಷ್ಟಿದ್ದರೂ, 90 ಕೈದಿಗಳನ್ನು ಇದರಲ್ಲಿ ಇರಿಸಲಾಗಿದೆ. ಸೆಲ್ಗಳು ಚಿಕ್ಕದಾಗಿದ್ದು, ಕೈದಿಗಳಿಂದ ತುಂಬಿ ಹೋಗಿವೆ. ಇಲ್ಲಿ ಸೂಕ್ತ ಸಂಖ್ಯೆಯ ಸಿಬ್ಬಂದಿ ಇಲ್ಲ. ಜೈಲಿನಲ್ಲಿ ಬಾಲಾಪರಾಧಿಗಳ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಗೊಯಿಯಾಸ್ ರಾಜ್ಯದ ಮಾನವ ಹಕ್ಕುಗಳ ಆಯೋಗದ ವಕೀಲ ಗಿಲ್ಲೆಸ್ ಸಬಾಸ್ಟಿನ್ ಗೋಮ್ಸ್ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ.