ಭಾರತೀಯ ವಾಯುಪಡೆಗಾಗಿ ಎಸ್-400 ಟ್ರೂಯಿಂಫ್ ವಾಯು ರಕ್ಷಣಾ ಕ್ಷಿಪಣಿ

ನವದೆಹಲಿ, ಮೇ 27- ಭಾರತೀಯ ವಾಯುಪಡೆಗಾಗಿ ಎಸ್-400 ಟ್ರೂಯಿಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಹೊಂದುವ 40,000 ಕೋಟಿ ರೂ. ವೆಚ್ಚದ ವಹಿವಾಟು ಸಂಬಂಧ ಭಾರತ ಮತ್ತು ರಷ್ಯಾ ನಡುವೆ ನಡೆದ ದರ ನಿಗದಿ ಮಾತುಕತೆ ಪೂರ್ಣಗೊಂಡಿದೆ.
ಆದರೆ ಎರಡು ರಾಷ್ಟ್ರಗಳು ದರದ ಬಗ್ಗೆ ಇನ್ನು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ.
ರಕ್ಷಣಾ ಶಸ್ತ್ರಾಸ್ತ್ರಗಳು ಮತ್ತು ಬೇಹುಗಾರಿಕೆ ವ್ಯವಸ್ಥೆಗಾಗಿ ರಷ್ಯಾದೊಂದಿಗೆ ವ್ಯವಹಾರದಲ್ಲಿ ತೊಡಗುವ ದೇಶಗಳು ಮತ್ತು ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳಲು ಕಾನೂನು ಜಾರಿಗೊಳಿಸಲು ಅಮೆರಿಕ ಮುಂದಾಗಿರುವ ಸಂದರ್ಭದಲ್ಲೇ ಈ ಎರಡು ರಾಷ್ಟ್ರಗಳು ಮಾತುಕತೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಅಮೆರಿಕದ ಈ ಕಾನೂನು ಆತಂಕದ ಹಿನ್ನೆಲೆಯಲ್ಲಿ ಭಾರತ ಮತ್ತು ರಷ್ಯಾ ನಡುವೆ ಕ್ಷಿಪಣಿ ವ್ಯವಸ್ಥೆ ಖರೀದಿ ಬಗ್ಗೆ ಮಾತುಕತೆ ಪೂರ್ಣಗೊಂಡಿದ್ದರೂ ಮುಂದಿನ ನಿರ್ಧಾರ ಅಂತಿಮಗೊಂಡಿಲ್ಲ ಎಂದು ರಕ್ಷಣಾ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.
ಅಕ್ಟೋಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಡುವೆ ವಾರ್ಷಿಕ ಶೃಂಗಸಭೆಗೆ ಮುನ್ನವೇ ಈ ಕುರಿತ ವ್ಯವಹಾರ ಅಧಿಕೃತ ಪ್ರಕಟಣೆಯಾಗುವ ನಿರೀಕ್ಷೆಯಿದೆ.
ಕಳೆದ ವಾರ ರಷ್ಯಾದ ಸೋಚಿ ನಗರದಲ್ಲಿ ಪುಟಿನ್ ಜೊತೆ ಮಾತುಕತೆ ವೇಳೆ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ