
ಬೆಂಗಳೂರು,ಮೇ 25
ವಿಧಾನಸಭೆ ಸ್ಪೀಕರ್ ಆಗಿ ಕೆ.ಆರ್. ರಮೇಶ್ ಕುಮಾರ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕೊನೆ ಕ್ಷಣದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು, ಸ್ಪೀಕರ್ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ ಕುಮಾರ್ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯಗೆ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಿದರು, ನೂತನ ಡಿಸಿಎಂ ಪರಮೇಶ್ವರ್ ಅವರು ಅದನ್ನು ಅನುಮೋದಿಸಿದರು. ಧ್ವನಿಮತದ ಬಳಿಕ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಘೋಷಿಸಿದರು. ತದನಂತರ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ಸ್ಪೀಕರ್ ಪೀಠವನ್ನು ಅಲಂಕರಿಸಿದರು.
ಇದಕ್ಕೂ ಮುನ್ನ ನಮ್ಮ ಪಕ್ಷದ ಸೂಚನೆಯಂತೆ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರ (Speaker) ಸ್ಥಾನಕ್ಕೆ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೆ. ಈಗ ಪಕ್ಷದಲ್ಲಿ ಮತ್ತೊಮ್ಮೆ ಚರ್ಚಿಸಿದಂತೆ, ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಸಭಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗುವುದು ಸೂಕ್ತವೆಂದು ಅಭಿಪ್ರಾಯ ಪಟ್ಟ ಕಾರಣ ನಾಮಪತ್ರ ವಾಪಸ್ಸು ಪಡೆಯುತ್ತಿದ್ದೇನೆ ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದರು.