ಬೆಂಗಳೂರು :ಮೇ-೨೫; ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಸದನದಲ್ಲಿ ವಿಶ್ವಾತಮತ ಗೊತ್ತುವಳಿ ಮಂಡಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಕಾಂಗ್ರೆಸ್ಗೆ ಧನ್ಯವಾದಗಳನ್ನು ಅರ್ಪಿಸಿದರು. ಕಾಂಗ್ರೆಸ್ನ ಅಧ್ಯಕ್ಷ ರಾಹುಲ್ ಗಾಂಧಿ, ಪರಮೇಶ್ವರ, ಖರ್ಗೆ ಮತ್ತು ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದರು.
2006ರಲ್ಲಿ ಬಿಜೆಪಿ ಜೊತೆ ಸರ್ಕಾರ ರಚಿಸಿದನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ನೆರವಿನಿಂದ ನನ್ನ ತಂದೆ ಪ್ರಧಾನಿಯಾದರು, ಇಂದು ನಾನು ಮುಖ್ಯಮಂತ್ರಿಯಾದೆ ಎಂದರು.
ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ವಾಜಪೇಯಿಯವರು ಬೆಂಬಲ ನೀಡುವುದಾಗಿ ಒಂದು ಚೀಟಿ ಕಳುಹಿದ್ದರು ಆದರೆ ನನ್ನ ತಂದೆಯವರು ಬಿಜೆಪಿ ಜೊತೆ ಹೋಗಲ್ಲ ಎಂದು ಹೇಳಿದರು. ನಾನಾಗಲಿ, ನಮ್ಮ ಕುಟುಂಬದವರಾಗಲಿ ಅಧಿಕಾರಕ್ಕೆ ಆಸೆ ಪಟ್ಟವರಲ್ಲ
ಬಿಜೆಪಿಗೆ ಅಧಿಕಾರ ನೀಡದಿದ್ದಕ್ಕೆ ವಚನ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿದ್ದರು, ನಾನು ಖಂಡಿತವಾಗಿಯೂ ವಚನ ಭ್ರಷ್ಟ ಅಲ್ಲ, ಅಂದಿನ ಪರಿಸ್ಥಿತಿ, ಪಕ್ಷವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಇತ್ತು ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ನಾನು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ, ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳನ್ನು ಕಾಂಗ್ರೆಸ್ ನೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಯಡಿಯೂರಪ್ಪ ಎಚ್ಚರಿಸಿದ್ದರು, ಯಡಿಯೂರಪ್ಪನವರು ಕಳೆದ ಎರಡು ವರ್ಷಗಳಿಂದ ರಾಜ್ಯ ಪ್ರವಾಸ ಮಾಡಿ ಶ್ರಮಿಸಿದ್ದಾರೆ, ನಾವು ಮನೆಯಲ್ಲಿ ಕುಳಿತು ಅಧಿಕಾರಕ್ಕೆ ಬಂದಿದ್ದೀವಿ ಎಂದು ವ್ಯಂಗ್ಯವಾಗಿ ಮಾತನಾಡಿರುವ ಹೆಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪನವರ ಆರೋಗ್ಯ ಚೆನ್ನಾಗಿರಬೇಕು, ಅವರು ಕಳೆದ 2 ವರ್ಷಗಳಲ್ಲಿ ರಾಜ್ಯ ಪ್ರವಾಸ ಮಾಡಿರುವಾಗ ಕಂಡಿರುವ ಜನರ ಸಮಸ್ಯೆಗಳ ಬಗ್ಗೆ ನಮ್ಮ ಸರ್ಕಾರಕ್ಕೆ ಮಾಹಿತಿ ನೀಡಿ ಸಹಕಾರ ನೀಡಲಿ, ಅವರು ಪ್ರತಿಭಟನೆ ನಡೆಸುವುದಕ್ಕೆ ಅವಕಾಶವೇ ಸಿಗದಂತೆ ನಾನು ಆಡಳಿತ ನಡೆಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.