ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ-ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ

ಶಾಂತಿನಿಕೇತನ್ :ಮೇ-25: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಪಶ್ಚಿಮ ಬಂಗಾಳದ ಶಾಂತಿನಿಕೇತನ್ ನಲ್ಲಿಂದು ಬಾಂಗ್ಲಾದೇಶ ಭವನವನ್ನು ಉದ್ಘಾಟಿಸಿದರು.

ವಿಶ್ವ ಭಾರತಿ ವಿಶ್ವವಿದ್ಯಾಲಯದ ಸಂಕೀರ್ಣದಲ್ಲಿ ಬಾಂಗ್ಲಾದೇಶ ಭವನ ನಿರ್ಮಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಉಪಸ್ಥಿತರಿದ್ದರು.

ಬಾಂಗ್ಲಾದೇಶ ಭವನದಲ್ಲಿನ ವಸ್ತುಪ್ರದರ್ಶನಾಲಯವು ಪ್ರಸಿದ್ಧ ಕವಿ ರವೀಂದ್ರನಾಥ್ ಠಾಗೋರ್ ಬಾಂಗ್ಲಾದೇಶದೊಂದಿಗೆ ಹೊಂದಿದ್ದ ಸಂಬಂಧವನ್ನು ಪ್ರದರ್ಶಿಸುತ್ತದೆ. ಬಾಂಗ್ಲಾದೇಶ ವಿಮೋಚನಾ ಯುದ್ಧ ಹಾಗೂ ಭಾರತ- ಬಾಂಗ್ಲಾ ನಡುವಿನ ಸಂಬಂಧವನ್ನು ಇದು ವಿವರಿಸುತ್ತದೆ.

25 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭವನ ನಿರ್ಮಿಸಲಾಗಿದ್ದು, ಈ ಹಣವನ್ನು ಬಾಂಗ್ಲಾದೇಶ ಸರ್ಕಾರವೇ ಭರಿಸಿದೆ. ಮ್ಯೂಸಿಯಂ ಆವರಣದ ನಿರ್ವಹಣೆಗಾಗಿ 10 ಕೋಟಿ ರೂಪಾಯಿ ಹಣವನ್ನು ಸಹಾಯವಾಗಿ ನೀಡಿದೆ.

ಈ ವೇಳೆ ಪ್ರಧಾನಿ ನರೇಂದ್ರಮೋದಿ ಶೇಕ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಲಿದ್ದು, ಶೇಕ್ ಹಸೀನಾ ಶನಿವಾರ ರಾತ್ರಿ ಬಾಂಗ್ಲಾದೇಶಕ್ಕೆ ಹಿಂತಿರುಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ