ನೂತನ ಸಭಾಧ್ಯಕ್ಷರಿಗೆ ನಾಯಕರ ಅಭಿನಂಧನೆ

ಬೆಂಗಳೂರು:ಮೇ-೨೫: ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾಗಿ ರಮೇಶ್ ಕುಮಾರ್‌ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಹಲವು ನಾಯಕರು ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ಸದನದ ಸಭಾಧ್ಯಕ್ಷ ಸ್ಥಾನದಲ್ಲಿ ಹಲವಾರು ಉತ್ತಮರನ್ನು ಕಂಡಿದ್ದೇವೆ. ಮೈಸೂರು ರಾಜರ ಆಳ್ವಿಕೆ, ಸ್ವಾತಂತ್ರ್ಯ ಪೂರ್ವದಲ್ಲಿಯೂ ನ್ಯಾಯ ಕೊಡಿಸುವ ಕಾರ್ಯ ವ್ಯವಸ್ಥಿತವಾಗಿ ಆಗುತ್ತಿತ್ತು. ಅದೇ ರೀತಿಯ ಕಾರ್ಯ ಇಲ್ಲಾಗುತ್ತಿದೆ. ವೈಕುಂಠ ಬಾಳಿಗಾರಂತವರನ್ನು ಕಂಡಿದ್ದೇವೆ. ಅರಸು ಸಿಎಂ ಆಗಿದ್ದಾಗ ನಾಗರತ್ನಮ್ಮ ಇದ್ದರು. ಅವರ ಸೇವೆ ಅವಿಸ್ಮರಣೀಯ. ಎಸ್ಎಂಕೆ, ಡಿ.ಬಿ.ಚಂದ್ರೇಗೌಡ ಇದ್ದರು. ಇಂದು ನನ್ನ ಪಾಲಿಗೆ ಈ ಅವಕಾಶ ಸಿಕ್ಕಿದ್ದು ಅವಿಸ್ಮರಣೀಯ ಎಂದರು.

94ರಲ್ಲಿ ಸಭಾಧ್ಯಕ್ಷರಾಗಿ ತಾವು ಎಲ್ಲರಿಗೂ ಮಾರ್ಗದರ್ಶನ ನೀಡಿದಿರಿ. ತಮ್ಮ ನಡವಳಿಕೆಯಿಂದ ಐದು ವರ್ಷ ಸದನದ ಕಲಾಪ ನಡೆಸಿದ್ದೀರಿ‌. ಈಗಲೂ ಅದೇ ಸ್ಥಿತಿ ಇದೆ. ನನಗೂ ಅದೇ ಅವಕಾಶ ಸಿಕ್ಕಿರುವುದು ಸಂತಸ. ನನ್ನ ತಂದೆ ಸಿಎಂ ಆಗಿದ್ದಾಗ ಕೂಡ ನೀವು ಸಭಾಧ್ಯಕ್ಷರಾಗಿದ್ದಿರಿ. ಇಂದು ಕೂಡ ಜವಾಬ್ದಾರಿ ವಹಿಸಿದ್ದೀರಿ. ನಿಮಗೆ ನಮ್ಮ ಸಹಕಾರ ಇರಲಿದೆ. ಹಳೆಯ, ಹೊಸ ಶಾಸಕರಿಗೆ ನಿಮ್ಮ ಅನುಭವ, ಸಲಹೆಯ ಅವಕಾಶ ಆಗಲಿ. ಉತ್ತಮ ದಿನಗಳು ಬರಲಿವೆ ಎಂಬ ವಿಶ್ವಾಸ ಇದೆ ಎಂದು ಹೃತ್ಪೂರ್ವಕ ಅಭಿನಂದನೆ ಎಂದು ಹೇಳಿದರು.

ಬಿಎಸ್‌ವೈ ಮಾತನಾಡಿ, 1995 ರಿಂದ ಐದು ವರ್ಷ ತಮ್ಮ ಕೆಲಸ ನೋಡಿದ್ದೇವೆ. ಈ ಸ್ಥಾನಕ್ಕೆ ಹೆಚ್ಚು ಗೌರವ ಸಿಗಲಿ ಎಂದು ಅವಿರೋಧ ಆಯ್ಕೆಗೆ ಅವಕಾಶ ಮಾಡಿ ಕೊಟ್ಟಿದ್ದೇವೆ. ಹೊಸ ಶಾಸಕರು ಬಂದಿದ್ದಾರೆ. ಅವರಿಗೆ ಅವಕಾಶ ನೀಡಿ. ಸಚಿವರಾಗಿ ಅನುಭವ ಇದೆ. ಈ ಕುರ್ಚಿಗೆ ನ್ಯಾಯ ಒದಗಿಸಿದ್ದು ನಮಗೆ ಗೊತ್ತಿದೆ. ನಿಮಗೆ ನಮ್ಮ ಸಹಕಾರ ಇರಲಿದೆ. ಪ್ರತಿಪಕ್ಷಕ್ಕೂ ಆಡಳಿತ ಪಕ್ಷದಷ್ಟೇ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಸಭಾಧ್ಯಕ್ಷ ಸ್ಥಾನ ರಾಜಕೀಯೇತರ ಸ್ಥಾನ. ಸರ್ವಾನುಮತದಿಂದ ಆಯ್ಕೆ ಮಾಡುವ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ಕಾಕತಾಳೀಯವಾಗಿ ಲಭಿಸಿದೆ. ತಮ್ಮ ಮೇಧಾವಿತನ, ಸಮಾಜ, ದೇಶದ ಬಗ್ಗೆ ಇರುವ ಅನುಭವ ನಮಗೆ ಮಾದರಿ. ತಾವು ಸದನ ನಡೆಸಿಕೊಂಡು ಸಾಗುವ ವಿಧಾನ ಮಾದರಿ. ರಾಜ್ಯ ವಿದಾನಮಂಡಲ ದೇಶಕ್ಕೆ ಮಾದರಿ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ತಮ್ಮಂಥವರ ಅಗತ್ಯ ಇದೆ. ನಿಯಮ ಮೀರಿ ನಾವು ನಡೆದುಕೊಳ್ಳುವುದಿಲ್ಲ. ಎರಡನೇ ಸಾರಿ ಸಭಾಧ್ಯಕ್ಷರಾಗಿದ್ದೀರಿ. ಯಶಸ್ವಿಯಾಗಿ ಮುನ್ನಡೆಸಿ. ನಿಮಗೆ ನಮ್ಮ ಸಹಕಾರ ಇದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ