ನವದೆಹಲಿ, ಮೇ 23-ಕೇಂದ್ರ ಸರ್ಕಾರ ಹೊಸದಾಗಿ ದಿವಾಳಿತನ ಸಂಹಿತೆ (ಐಬಿಸಿ) ಜಾರಿಗೊಳಿಸಿದ ನಂತರ ಎಚ್ಚೆತ್ತುಕೊಂಡಿರುವ ಸುಮಾರು 2,100 ಕಂಪನಿಗಳು 83,000 ಕೋಟಿ ರೂ.ಗಳ ಬ್ಯಾಂಕ್ ಬಾಕಿಯನ್ನು ಇತ್ಯರ್ಥಗೊಳಿಸಿವೆ.
ಬ್ಯಾಂಕ್ನಿಂದ ಪಡೆದ ಸಾಲ ಮರು ಪಾವತಿಯಲ್ಲಿ ಸುಸ್ತಿದಾರರಾದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಹೊಸ ನೀತಿಯಲ್ಲಿ ಅವಕಾಶವಿದೆ. ತಮ್ಮ ಕಂಪನಿಗಳ ವಿರುದ್ಧ ಬ್ಯಾಂಕುಗಳು ಮತ್ತು ಸರ್ಕಾರ ಕ್ರಮ ಕೈಗೊಂಡರೆ ಅವುಗಳ ಮೇಲೆ ತಮ್ಮ ಹತೋಟಿ ತಪ್ಪುತ್ತದೆ ಎಂಬ ಭೀತಿಯಿಂದ ಈ ಸಂಸ್ಥೆಗಳು ಸಾಲ ಮೊತ್ತಗಳನ್ನು ಚುಕ್ತಾ ಮಾಡಿವೆ.
2,100 ಕಂಪನಿಗಳು ಈವರೆಗೆ 83,000 ಕೋಟಿ ರೂ.ಗಳು ಬಾಕಿ ಮೊತ್ತಗಳನ್ನು ಪಾವತಿಸಿವೆ ಎಂದು ಕಾಪೆರ್Çರೇಟ್ ವ್ಯವಹಾರಗಳ ಸಚಿವಾಲಯ(ಎಂಸಿಎ)ಕ್ಕೆ ಲಭ್ಯವಾದ ಅಂಕಿ-ಅಂಶ ಮಾಹಿತಿಗಳು ತಿಳಿಸಿವೆ.
ಸುಸ್ತಿದಾರ ಕಂಪನಿಗಳನ್ನು ಸಾಲ ವಸೂಲಾಗದ(ಎನ್ಪಿಎ) ವರ್ಗಕ್ಕೆ ಸೇರಿಸಿದರೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ದಿವಾಳಿತನ ವಿಚಾರಣೆ ನ್ಯಾಯಾಲಯ) ಇಂಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ನಿಯಮಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ತಿದ್ದುಪಡಿ ಮಾಡಿತ್ತು. ಸಾಕಷ್ಟು ಸಮಯಾವಕಾಶಗಳ ಪುನರಾವರ್ತಿತ ಮನವಿಗಳ ನಂತರ ಇಂಥ ಸಾಲಗಳನ್ನು ಎನ್ಪಿಎಯನ್ನಾಗಿ ವರ್ಗೀಕರಣ ಮಾಡಲಾಗುತ್ತದೆ. ಈ ರೀತಿ ವರ್ಗೀಕರಣವಾದರೆ ಕಂಪನಿಯ ಪ್ರವರ್ತಕರನ್ನು ವಹಿವಾಟುಗಳಿಗೆ ನಿಷೇಧಿಸುವ ಅವಕಾಶ ಕಾನೂನಿನಲ್ಲಿದೆ.
ಸರ್ಕಾರ ಈ ನಿಯಮಗಳಿಗೆ ತಿದ್ದುಪಡಿಗಳನ್ನು ಮಾಡಿದ ನಂತರ ಕಂಪನಿಗಳ ಮೇಲೆ ತಮ್ಮ ನಿಯಂತ್ರಣ ತಪ್ಪಬಹುದೆಂಬ ಆತಂಕಕ್ಕೆ ಒಳಗಾಗಿರುವ ಪ್ರವರ್ತಕರು ಬ್ಯಾಂಕ್ಗಳಲ್ಲಿ ಬಾಕಿ ಉಳಿದಿರುವ ಸುಸ್ತಿ ಮೊತ್ತವನ್ನು ಇತ್ಯರ್ಥಗೊಳಿಸಿ ಕಂಟಕದಿಂದ ಪಾರಾಗಿದ್ದಾರೆ.
ಎಸ್ಸಾರ್, ಭೂಷಣ್ ಗ್ರೂಪ್, ಜೈಪ್ರಕಾಶ್ ಸಮೂಹ ಸಂಸ್ಥೆ ಸೇರಿದಂತೆ ಪ್ರತಿಷ್ಠಿತ ಕಂಪನಿಗಳು ಸಾಲಗಳನ್ನು ಮರುಪಾವತಿ ಮಾಡಿದ್ದು, ಉಳಿದ ಸಂಸ್ಥೆಗಳು ಸಹ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ.