ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರ – ಎಚ್.ಡಿ.ಕುಮಾರಸ್ವಾಮಿ

ಧರ್ಮಸ್ಥಳ, ಮೇ 22-ಕಾಂಗ್ರೆಸ್-ಜೆಡಿಎಸ್ ಶಾಸಕರ ಬಹುಮತವಿರುವವರೆಗೂ ಸರ್ಕಾರ ಸುಭದ್ರವಾಗಿರಲಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಂಜುನಾಥಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ.
ಕಾಂಗ್ರೆಸ್ ಜೊತೆ ಜೆಡಿಎಸ್ ಮಾಡಿಕೊಂಡಿರುವ ಮೈತ್ರಿಯನ್ನು ಅಪವಿತ್ರ ಎಂದು ಟೀಕಿಸುತ್ತಾರೆ. ಇದರಲ್ಲಿ ಪವಿತ್ರ-ಅಪವಿತ್ರ ಅನ್ನೋವುದಕ್ಕಾಗುವುದಿಲ್ಲ. ಶಾಸಕರ ಬಹುಮತವಿರುವವರೆಗೂ ಸರ್ಕಾರ ನಡೆಯಲಿದೆ ಎಂದರು.
ಮಂತ್ರಿ ಮಂಡಲ ರಚನೆ ಕುರಿತ ಗೊಂದಲದ ವಿಚಾರ ಮಾಧ್ಯಮಗಳ ಕಟ್ಟುಕತೆಯಾಗಿದೆ. ಈ ಬಗ್ಗೆ ಇನ್ನೂ ಯಾವುದೇ ರೀತಿಯ ಚರ್ಚೆ ನಡೆದಿಲ್ಲ.
ಕಾಂಗ್ರೆಸ್ ನಾಯಕರ ವಿಶ್ವಾಸ ಪಡೆದುಕೊಂಡೇ ಮುಂದಿನ ಕಾರ್ಯವನ್ನು ನಿರ್ವಹಿಸಲಾಗುವುದು ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳ ಅಂಶಗಳನ್ನು ಜಾರಿಗೆ ತರಲು ಸರ್ಕಾರದ ಹಣಕಾಸು ಪರಿಸ್ಥಿತಿ ಸದೃಢವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರೈತ ಸಮುದಾಯ ಉಳಿಸುವ ನಿಟ್ಟಿನಲ್ಲಿ ಘೋಷಣೆ ಮಾಡಿರುವ ಯೋಜನೆ ಜಾರಿ ಮಾಡಲಾಗುವುದು ಎಂದರು.
ಕಾಂಗ್ರೆಸ್ ವರಿಷ್ಠರು ಅವರ ಪಕ್ಷದ ನಾಯಕರ ಮನವೊಲಿಸಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿಕೂಟ ರಚನೆಯ ತೀರ್ಮಾನಕೈಗೊಂಡಿದ್ದಾರೆ. ಇದಕ್ಕೆ ಮೂಲಕಾರಣ ದೈವಪ್ರೇರಣೆ. ಈ ಕಾರಣದಿಂದಾಗಿ ಹಲವು ದೇವಾಲಯಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದರು.
ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಬೇಕು ಆ ಮೂಲಕ ರೈತರ ಬದುಕು ಹಸನಾಗಬೇಕು. ಇದಕ್ಕಾಗಿ ದೇವರ ಅನುಗ್ರಹ ಕೋರಿರುವುದಾಗಿ ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಹಲವಾರು ಘಟನೆಗಳು ನಡೆದಿವೆ. ಕಳೆದ ಒಂದು ವಾರದಿಂದ ಹಲವು ರೀತಿಯ ಘಟನೆಗಳು ನಡೆದಿದ್ದು, ಜನರ ಆಶೀರ್ವಾದ ನಮ್ಮ ಮೇಲಿದೆ ಎಂದು ಕುಮಾರಸ್ವಾಮಿ ನುಡಿದರು.
ಕರಾವಳಿ ಭಾಗದ ಜನರು ಸಹೋದರ ಮನೋಭಾವದಿಂದ ಬದುಕಬೇಕು. ಯಾವುದೇ ದ್ವೇಷದ ರಾಜಕಾರಣಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.
ಕಾನೂನು ಭಂಗಕ್ಕೆ ಅವಕಾಶ ನೀಡಬಾರದು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದ ಕುಮಾರಸ್ವಾಮಿ, ಶಾಂತಿ ಕದಡುವ ಜನರ ಬಗ್ಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
ಎತ್ತಿನ ಹೊಳೆ ಯೋಜನೆ ಹೆಸರಿನ ಅಕ್ರಮ ತಡೆಯುವುದಾಗಿ ಈ ಹಿಂದೆ ಭರವಸೆ ನೀಡಿದ್ದೆ. ಆದರೆ ಎತ್ತಿನ ಹೊಳೆ ಯೋಜನೆ ಜಾರಿ ತಡೆಯುತ್ತೇನೆ ಎಂದು ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಕೃತಿ ವಿನಾಶ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ