ಬೆಂಗಳೂರು:ಮೇ-22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ರಚನೆಯಲ್ಲಿ ತಮ್ಮ ಹಸ್ತಕ್ಷೇಪವಿಲ್ಲ, ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳನ್ನು ನಾನು ತೆಗೆದುಕೊಳ್ಲುತ್ತಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ರಚನೆಯ ಬಗ್ಗೆ ಕೆಲವು ಊಹಪೋಹಾ ಸುದ್ದಿಗಳು ಹರಿದಾಡುತ್ತಿರುವುದನ್ನು ನಾನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೀನಿ.
ಸಮ್ಮಿಶ್ರ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರಗಳ ಬಗ್ಗೆ ಆಗಲಿ ಮಂತ್ರಿ ಮಂಡಲದ ರಚನೆಯ ಬಗ್ಗೆ ಆಗಲಿ ಸಮನ್ವಯ ಸಮಿತಿ ರಚನೆಯ ಬಗ್ಗೆ ಆಗಲಿ ಹಾಗೂ ಸರ್ಕಾರದ ಆಡಳಿತ ವಿಚಾರದಲ್ಲಾಗಲಿ
ನಾನು ಬಾಗಿಯೂ ಆಗುವುದಿಲ್ಲ ಅಥವಾ ನನ್ನ ಹಸ್ತಕ್ಷೇಪವು ಇರುವುದಿಲ್ಲ ಎಂದು ಈ ಮೂಲಕ ಮಾಧ್ಯಮದವರ ಗಮಮಕ್ಕೆ ಮತ್ತು ಈ ಮೂಲಕ ರಾಜ್ಯದ ಜನತೆಗೆ ತಿಳಿಸಲು ಇಚ್ಛಿಸುತ್ತೇನೆ ಎಂದು ದೇವೇಗೌಡರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಎಂಬಿ ಪಾಟೀಲ್ ಮಂತ್ರಿ ಸ್ಥಾನಕ್ಕೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಸುದ್ದಿಗಳ ಕುರಿತು ಪ್ರತಿಕ್ರಿಯೆ ನೀಡಿದರು. ‘ರಾಜ್ಯದಲ್ಲಿ ಸ್ಥಿರ ಸರ್ಕಾರ ಮಾತ್ರವೇ ನಮ್ಮ ಉದ್ದೇಶ. ಈ ಕುರಿತು ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಆದರೆ ಯಾರಿಗೆ ಮಂತ್ರಿ ಸ್ಥಾನ ದೊರೆಯಬೇಕು ಎಂಬುದು ನಮ್ಮ ಕೆಲಸವಲ್ಲ. ಅದನ್ನು ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ತಾವು ಯಾವುದೇ ಅಧಿಕಾರಿಗಳೊಂದಿಗೆ ಆಡಳಿತದ ಕುರಿತು ಚರ್ಚಿಸಿಲ್ಲ. ಆದರೆ ಅಧಿಕಾರಿಗಳು ಹೂಗುಚ್ಚ ನೀಡಿ ಶುಭಕೋರಿದರೆ, ಅದನ್ನು ರಾಜಕೀಯ ಮಾಡಬಾರದು ಎಂದು ಎಚ್ ಡಿ ದೇವೇಗೌಡ ಹೇಳಿದರು.
ಇತ್ತೀಚೆಗಷ್ಟೇ ಎಚ್ ಡಿ ದೇವೇಗೌಡ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನೀಲಮಣಿ ರಾಜು ಅವರನ್ನು ಭೇಟಿ ಮಾಡಿದ್ದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಂತೆಯೇ ಈ ಹಿಂದೆ ಸಿಎಂ ಆಗಿದ್ದ ಸಂದರ್ಭಲ್ಲಿ ಬಿಎಸ್ ಯಡಿಯೂರಪ್ಪ ಅವರು ಮಾಡಿದ್ದ ಆಡಳಿತಾತ್ಮಕ ನಿರ್ಧಾರ ಹಿಂತೆಗೆತೆದ ಹಿಂದೆ ದೇವೇಗೌಡರ ಹಸ್ತಕ್ಷೇಪವಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.