ಭಾವನಾತ್ಮಕ ಭರವಸೆ ಈಡೇರಿಸಲು ಅಸಾಧ್ಯ; ಎಚ್‍ಡಿಕೆ ಸಾಲ ಮನ್ನಾ ಭರವಸೆಗೆ ಡಿಕೆಶಿ ಪರೋಕ್ಷ ಟಾಂಗ್!

ಬೆಂಗಳೂರು,ಮೇ 21

ಯಾವುದೋ ಎಮೋಷನಲ್‍ನಲ್ಲಿ ಮಾತನಾಡಿ ಭರವಸೆ ನೀಡಿದರೆ ಎಲ್ಲವನ್ನೂ ಈಡೇರಿಸಲು ಆಗುವುದಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ಭರವಸೆಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು, ದೇವೇಗೌಡರು, ಕುಮಾರಸ್ವಾಮಿ ಹಾಗೂ ನನ್ನ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅವರು ಅಧಿಕಾರದಲ್ಲಿ ಇದ್ದಾಗ ನನ್ನ ಮೇಲೆ ಕೇಸು ಸಹಾ ಹಾಕಿಸಿದ್ರು. ಆದರೆ ನಾನು ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಅವರ ಪ್ಲಾನ್ ಆಫ್ ಆಕ್ಷನ್ ಪ್ರಕಾರ ಕೆಲಸ ಮಾಡಿದ್ದೇನೆ.

ಫಲಿತಾಂಶಕ್ಕೆ ಮುನ್ನವೇ ನಾನು ಮತ್ತು ರಾಹುಲ್ ಗಾಂಧಿ ಕುಳಿತು ಮಾತನಾಡಿದ್ದೆವು. ನಮ್ಮ ಅಂಕಿ ಸಂಖ್ಯೆ ಎಷ್ಟು ಬಂದರೆ ಏನು ಮಾಡಬೇಕು ಎಂದು ನಿರ್ಧರಿಸಿದ್ದೆವೋ ಹಾಗೆಯೇ ಮಾಡಿದ್ದೇವೆ ಎಂದರು.

ನನ್ನ ಪಕ್ಷ ನೀಡುವ ಜವಾಬ್ದಾರಿ ನಾನು ನಿರ್ವಹಿಸುತ್ತೇನೆ. ನನ್ನ ಮನಸ್ಸಲ್ಲಿ ಏನಿದೆ ಎಂಬುದನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಅವರು ಸರ್ಕಾರದ ಜವಾಬ್ದಾರಿ ಕೊಡ್ತಾರಾ ಪಕ್ಷದ ಜವಾಬ್ದಾರಿ ಕೊಡ್ತಾರಾ ಗೊತ್ತಿಲ್ಲ ಎಂದು ಹೇಳಿದರು.

ಯಡಿಯೂರಪ್ಪ ಅವರಂತೆ, ನನಗೆ ಅರ್ಜೆಂಟ್ ಇಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ತಾಳ್ಮೆಯಿಂದ ಯೋಚಿಸಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಈಗಲೇ ಸಿದ್ಧನಿಲ್ಲ ಎಂಬ ಸಂದೇಶವನ್ನು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಮುಖಂಡರಿಗೆ ರವಾನಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ