ತಿರುವನಂತಪುರ:ಮೇ-21: ಕೇರಳದಾದ್ಯಂತ ಮಾರಣಾಂತಿಕ ನಿಪಾ ವೈರಸ್ ಅತಂಕ ಸೃಷ್ಟಿಸಿದ್ದು, ಎರಡು ವಾರಗಳಲ್ಲಿ ಈ ವೈರಸ್ ಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಉತ್ತರ ಕೇರಳದಲ್ಲಿ ನಿಪಾ ವೈರಸ್ ಗೆಇಂದು ಬೆಳಿಗ್ಗೆ ಮತ್ತೇರಡು ಜನ ಮೃತಪಟ್ಟಿದ್ದಾರೆ. ಈ ವೈರಸ್ ಪೀಡಿತ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದ ಲಿನಾ ಎಂಬ ನರ್ಸ್ ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸೋಮವಾರ ಬೆಳಿಗ್ಗೆ ಲಿನಾ ಮೃತಪಟ್ಟಿದ್ದಾರೆ.
ಈ ವೈರಸ್ನ ಸೋಂಕು ಹರಡದಂತೆ ತಡೆಯಲು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವು ಸಹ ತಜ್ಞರ ತಂಡವನ್ನು ಕೇರಳಕ್ಕೆ ಕಳುಹಿಸಿದೆ. ಈ ವೈರಸ್ ತಗುಲಿರುವ 12 ಜನರು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇನ್ನು 20 ಜನರ ಮೇಲೆ ನಾವು ನಿಗ ಇರಿಸಿದ್ದೇವೆ. ವೈರಸ್ ಪೀಡಿದ ಪ್ರದೇಶದ ಸುತ್ತಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದೆ ಎಂದು ಕೇರಳದ ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಅಪಾಯಕಾರಿ ವೈರಸ್ ತಡೆಯಲು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್ಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವೈರಸ್ನ ಗುಣಲಕ್ಷಣಗಳನ್ನು ತಿಳಿಸಲು, ಅದರಿಂದ ಸುರಕ್ಷತೆ ಕಾಯ್ದುಕೊಳ್ಳಲು ಸಹಾಯವಾಣಿ ಸಹ ಆರಂಭಿಸಿದೆ.
ಕೇರಳದ ಪೆರಂಬ್ರ ಎಂಬ ಹಳ್ಳಿಯ ಒಂದೇ ಕುಟುಂಬದ ಮೂವರು ಮೃತಪಟ್ಟ ಬಳಿಕ ಈ ವೈರಸ್ ಬೆಳಕಿಗೆ ಬಂದಿತ್ತು. ‘ಸಾಕು ಪ್ರಾಣಿಗಳ ಸಾವಿನ ಬಳಿಕ ರೋಗ ಹರಡುತ್ತಿದೆ. ಇದನ್ನು ಸ್ಥಳೀಯ ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಅವರ ನಿರ್ಲಕ್ಷದಿಂದಾಗಿ ಈಗ ಸೋಂಕು ಹೆಚ್ಚುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಮಲೇಷ್ಯಾದ ನಿಪಾ ಎಂಬಲ್ಲಿ ಈ ವೈರಸ್ 1998ರಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಬಾವುಲಿ, ಹಂದಿ ಮತ್ತು ಸಾಕು ಪ್ರಾಣಿಗಳಿಂದ ಹರಡುವ ಈ ವೈರಸ್ ಕೇರಳದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಇದರಿಂದ ಹರಡುವ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲ. ಈ ವೈರಸ್ಗೆ ತುತ್ತಾದವರು ತೀವ್ರತರದ ಸುಸ್ತು, ಜ್ವರ, ತಲೆನೋವು, ನಿದ್ರಾಹೀನತೆಯಿಂದ ಬಳಲುತ್ತಾರೆ.