ನವದೆಹಲಿ, ಮೇ 20- ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಯೊಂದರಲ್ಲಿ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ ಸಿದ್ಧತೆಗಳನ್ನು ಬಲವರ್ಧನೆ ಮಾಡಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ) ತಂತ್ರಜ್ಞಾನ ಅಳವಡಿಸುವ ಕಾರ್ಯ ಆರಂಭಿಸಿದೆ.
ಮಾನವ ರಹಿತ ಯುದ್ಧ ಟ್ಯಾಂಕ್ಗಳು, ನೌಕೆಗಳು, ವೈಮಾನಿಕ ವಾಹನಗಳು ಮತ್ತು ರೋಬೋ ಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಭೂಸೇನೆ, ನೌಕಾದಳ ಮತ್ತು ವಾಯು ಪಡೆಯನ್ನು ಮತ್ತಷ್ಟು ಬಲಗೊಳಿಸುವ ಯೋಜನೆ ಇದಾಗಿದೆ.
ಅತ್ಯಾಧುನಿಕ ತಂತ್ರಜ್ಞಾನದ ಯುದ್ಧ ಕೌಶಲಗಳನ್ನು ಈ ಮೂರೂ ಸಶಸ್ತ್ರ ಪಡೆಗಳಿಗೆ ಅಳವಡಿಸುವ ಮೂಲಕ ವೈರಿ ರಾಷ್ಟ್ರಗಳಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಕಂಟಕವನ್ನು ಸಮರ್ಥವಾಗಿ ನಿಭಾಯಿಸುವುದು ಇದರ ಉದ್ದೇಶ.
ಈ ಬಗ್ಗೆ ಮಾಹಿತಿ ನೀಡಿದ ರಕ್ಷಣಾ ಉತ್ಪಾದನೆ ವಿಭಾಗದ ಕಾರ್ಯದರ್ಶಿ ಅಜಯ್ಕುಮಾರ್, ಭೂಸೇನೆ, ನೌಕಾದಳ ಮತ್ತು ವಾಯು ಪಡೆಗಳಿಗೆ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಲಾಗಿದೆ. ಭವಿಷ್ಯದ ಯುದ್ಧ ಸಾಮಥ್ರ್ಯವನ್ನು ಮೇಲ್ದರ್ಜೆಗೇರಿಸಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಲಿದೆ ಎಂದರು.
ಸಾವು-ನೋವು ತಪ್ಪಿಸಲು ಮಾನವ ರಹಿತ ಯುದ್ಧ ಟ್ಯಾಂಕ್ಗಳು, ಸಮರ ಜಲನೌಕೆಗಳು, ವೈಮಾಂತರಿಕ್ಷ ಸಾಧನಗಳು (ಡ್ರೋಣ್, ಯುಎವಿ ಇತ್ಯಾದಿ) ಹಾಗೂ ಶಸ್ತ್ರ ಸಜ್ಜಿತ ಯಂತ್ರ ಮಾನವರನ್ನು ಇಂತಹ ಸಂದರ್ಭಗಳಲ್ಲಿ ಬಳಸಲಾಗುವುದು ಎಂದು ಅಜಯ್ಕುಮಾರ್ ವಿವರಿಸಿದರು.
ಟಾಟಾ ಸಂಸ್ಥೆ ಮುಖ್ಯಸ್ಥ ಎನ್.ಚಂದ್ರಶೇಖರನ್ ನೇತೃತ್ವದಲ್ಲಿ ಉನ್ನತಾಧಿಕಾರದ ಕಾರ್ಯಪಡೆಯನ್ನು ಈ ಉದ್ದೇಶಕ್ಕಾಗಿ ರಚಿಸಲಾಗಿದ್ದು, ಯೋಜನೆಯನ್ನು ಅಂತಿಮಗೊಳಿಸಿ ತಂತ್ರಜ್ಞಾನ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದರು.