ಬೆಂಗಳೂರು:ಮೇ-19: ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಡೆಸುವ ವಿಶ್ವಾಸಮತ ಯಾಚನೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇಡೀ ರಾಜ್ಯದ ಜನತೆ ರಾಜ್ಯದ ಭವಿಷ್ಯ ಎಣಾಗಲಿದೆ ಎಂಬುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾದರೆ ವಿಶ್ವಾಸಮತ ಯಾಚನೆ ಪ್ರಕ್ರಿಯಗಳು ಹೇಗೆ ನಡೆಯಲಿದೆ..? ಇಲ್ಲಿದೆ ಕೆಲ ಮಾಹಿತಿ.
ಇಂದು ಬೆಳಗ್ಗೆ 11 ಗಂಟೆಗೆ ನೂತನ ಶಾಸಕರಿಗೆ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ನೂತನ ಶಾಸಕರ ಪ್ರಮಾಣವಚನ ನಡೆದ ಬಳಿಕ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ನಡೆಯಲಿದೆ. ಕೆ.ಜೆ.ಬೋಪಯ್ಯ ಅವರು ಯಡಿಯೂರಪ್ಪ ಬಳಿ ವಿಶ್ವಾಸಮತ ಯಾಚನೆ ಮಾಡುವಂತೆ ಸೂಚಿಸಲಿದ್ದಾರೆ. ಮತ್ತು ಅದಕ್ಕೆ ಸದನ ಸದಸ್ಯರು ಬೆಂಬಲ ಸೂಚಿಸುವಂತೆ ಕೇಳಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಇಂದು ವಿಶ್ವಾಸಮತ ಯಾಚನೆ ಸಂದರ್ಭದಲ್ಲಿನ ಪ್ರಕ್ರಿಯೆಗಳನ್ನು ವಿವರಿಸಿದ ಅವರು, ಇಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಲಿದ್ದಾರೆ. ವಿಪ್ ಜಾರಿ ಸದನಕ್ಕೆ ಗೈರು ಹಾಜರಾಗಿರುವ ಅಥವಾ ಪ್ರಮಾಣವಚನ ಸ್ವೀಕರಿಸದಿರುವ ಶಾಸಕರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.
ವಿಶ್ವಾಸಮತಕ್ಕೆ ಬೆಂಬಲಿಸುವ ಶಾಸಕರು ಎದ್ದು ನಿಂತು ಹೇಳಬೇಕು ಮತ್ತು ಅವರು ಸೂಚಿಸಿದ ಹೆಸರುಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಒಂದು ಸಾಲಿನ ಶಾಸಕರ ವಿಶ್ವಾಸಮತವನ್ನು ಒಂದು ಬಾರಿಗೆ ಲೆಕ್ಕಹಾಕಲಾಗುತ್ತದೆ. ನಂತರ ವಿಶ್ವಾಸಮತಕ್ಕೆ ವಿರುದ್ಧವಾಗಿರುವ ಶಾಸಕರ ಹೆಸರುಗಳನ್ನು ಲೆಕ್ಕಹಾಕಲಾಗುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಮಸಮನಾಗಿ ಶಾಸಕರ ಬೆಂಬಲ ಸಿಕ್ಕಿದರೆ ಹಂಗಾಮಿ ಸ್ಪೀಕರ್ ತಮ್ಮ ಮತ ಚಲಾಯಿಸುತ್ತಾರೆ ಎಂದು ಮೂರ್ತಿ ತಿಳಿಸಿದರು.
ವಿಶ್ವಾಸಮತ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ, “ನನ್ನ ನೇತೃತ್ವದ ಸಚಿವ ಸಂಪುಟದ ಮೇಲೆ ವಿಶ್ವಾಸ ವ್ಯಕ್ತಪಡಿಸುವಂತೆ ಕೋರುತ್ತೇನೆ’ ಎಂಬ ಪ್ರಸ್ತಾವವನ್ನು ಸದನದಲ್ಲಿ ಮಂಡಿಸುತ್ತಾರೆ. ಸಾಮಾನ್ಯವಾಗಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮೊದಲು ಮುಖ್ಯಮಂತ್ರಿಯಾದವರು ಸದನದಲ್ಲಿ ಪ್ರಸ್ತಾವನೆ ಮಂಡಿಸುತ್ತಾರೆ. ಅದನ್ನು ಮತಕ್ಕೆ ಹಾಕುವಂತೆ ಸಭೆಯ ಯಾವುದೇ ಸದಸ್ಯರೊಬ್ಬರು ಅಥವಾ ಪಕ್ಷ ಕೋರುತ್ತದೆ. ಆಗ 2-3 ನಿಮಿಷಗಳ ಕಾಲ ಸದನದಲ್ಲಿ ಬೆಲ್ ಮಾಡಲಾಗುತ್ತದೆ. ಬಳಿಕ, ಬೆಲ್ ಆಫ್ ಮಾಡಿ, ಸದನದ ಬಾಗಿಲು ಬಂದ್ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಸದನದಲ್ಲಿ ಹಾಜರಿರುವ ಸದಸ್ಯರನ್ನು ಮಾತ್ರ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಮೊದಲು ವಿಶ್ವಾಸ ಮತದ ಪರವಾಗಿ ಇರುವ ಸದಸ್ಯರನ್ನು ಎದ್ದು ನಿಲ್ಲಿಸಿ, ತಲೆ ಎಣಿಕೆ ಮಾಡಲಾಗುತ್ತದೆ. ಬಳಿಕ ವಿಶ್ವಾಸಮತ ಯಾಚನೆಗೆ ವಿರುದ್ಧವಾಗಿರುವವರ ತಲೆ ಎಣಿಸಲಾಗುತ್ತದೆ. ಪರ ಎಷ್ಟು, ವಿರೋಧ ಎಷ್ಟು ಅನ್ನುವುದನ್ನು ಸ್ಪೀಕರ್ ಘೋಷಿಸುತ್ತಾರೆ.
ಇದು ಸಾಮಾನ್ಯವಾಗಿ ನಡೆಯುವ ಪ್ರಕ್ರಿಯೆ. ಆದರೆ, ವಿಶ್ವಾಸ ಮತಯಾಚನೆ ಪ್ರಕ್ರಿಯೆ ಹೇಗಿರಬೇಕು ಎಂಬುದನ್ನು ಅಂತಿಮವಾಗಿ ಸ್ಪೀಕರ್ ನಿರ್ಧರಿಸುತ್ತಾರೆ.