ಇಂದು ವಿಶ್ವಾಸಮತ ಯಾಚನೆ ಹಿನ್ನಲೆ: ಜೆಡಿಎಸ್-ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮನ; ಬಿಗಿ ಭದ್ರತೆ

ಬೆಂಗಳೂರು:ಮೇ-19: ಬಿಜೆಪಿ ಸರ್ಕಾರ ಬಹುಮತವನ್ನು ಸದನದಲ್ಲಿ ಇಂದು ಸಂಜೆ 4ಗಂಟೆಗೆ ಸಾಬೀತುಪಡಿಸಿಲು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ರಾಜ್ಯರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೂರು ಪಕ್ಷಗಳು ಮ್ಯಾಜಿಕ್‌ ನಂಬರ್‌‌ ಗೇಮ್‌ಗಾಗಿ ತಮ್ಮ ರಾಜಕೀಯ ಪಟ್ಟುಗಳನ್ನು ಪ್ರಯೋಗಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದ್ ಸಂಜೆ ವಿಶ್ವಾಸಮತ ಹಿನ್ನೆಲೆಯಲ್ಲಿ ಈಗಾಗಲೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಹೈದರಾಬಾದ್ ನಿಂದ ಬೆಳಿಗ್ಗೆ ಬೆಂಗಳೂರಿಗೆ ಕರೆ ತರಲಾಗಿದೆ. ನಗರಕ್ಕೆ ಆಗಮಿಸಿದ ಎರಡೂ ಪಕ್ಷಗಳ ಶಾಸಕರಿಗೆ ಬಿಗಿ ಭದ್ರತೆ ಒಡಗಿಸಲಾಗಿದೆ.

ಖರೀದಿ ಭೀತಿಯಿಂದ ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲಿದ್ದ ಶಾಸಕರನ್ನು ಗುರುವಾರ ರಾತ್ರಿ ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ಗೆ ಕಾಂಗ್ರೆಸ್‌ ಸ್ಥಳಾಂತರಿಸಿತ್ತು. ಶಾಂಗ್ರಿಲಾ ಹೋಟೆಲ್‌ನಲ್ಲಿದ್ದ ತನ್ನ ಶಾಸಕರ ವಾಸ್ತವ್ಯವನ್ನೂ ಜೆಡಿಎಸ್‌ ಹೈದರಾಬಾದ್‌ಗೆ ಬದಲಿಸಿತ್ತು. ಇದೀಗ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ.

ಶಾಸಕರನ್ನು ಕರೆದುಕೊಂಡು ಬರುತ್ತಿರುವ ಬಸ್‌ಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಶಾಸಕರು ನಗರದ ಪ್ರಮುಖ ಹೋಟೆಲ್ ಅಥವಾ ರೆಸಾರ್ಟ್‌ಗೆ ತೆರಳಿ ವಿಶ್ರಾಂತಿ ಪಡೆಯಲಿದ್ದು, ಸುಮಾರು 11 ಗಂಟೆ ವೇಳೆಗೆ ವಿಧಾನಸಭೆಗೆ ಹಾಜರಾಗಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ