ಕೆ.ಜಿ.ಬೋಪಯ್ಯ ಹಂಗಾಮಿ ಸ್ಪೀಕರ್- ಬೋಪಯ್ಯ ನೇಮಕ ಪ್ರಶ್ನಿಸಿ ಕಾಂಗ್ರೆಸ್ ನಿಂದ ಸುಪ್ರಿಂಗೆ ಅರ್ಜಿ

ಬೆಂಗಳೂರು, ಮೇ 18- ನಾಳೆಯೇ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ನಡೆದಿರುವ ಬೆಳವಣಿಗೆಗಳು ವಿವಾದಕ್ಕೀಡಾಗಿವೆ.
ಅಧಿವೇಶನ ಕರೆಯಲು ಸೂಚನೆ ರವಾನೆಯಾಗಿದೆ. ದಿಡೀರ್ ಬೆಳವಣಿಗೆಯಲ್ಲಿ ರಾಜ್ಯಪಾಲ ವಜುಬಾಯಿ ವಾಲ ಅವರು ಬಿಜೆಪಿಯ ಹಿರಿಯ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಸಭಾಧ್ಯಕ್ಷರನ್ನಾಗಿ ನೇಮಿಸಿದ್ದು, ಇಂದು ಪ್ರಮಾಣವಚನ ಬೋಧಿಸಿದ್ದಾರೆ. ಬೋಪಯ್ಯ ಅವರ ನೇಮPವÀನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿದೆ.
ಬೋಪಯ್ಯ ಈ ಮೊದಲು ಸ್ಪೀಕರ್ ಆಗಿದ್ದಾಗ ಹಲವಾರು ವಿವಾದಿತ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬುದು ಕಾಂಗ್ರೆಸ್ ವಾದವಾಗಿದೆ. ಹಂಗಾಮಿ ಸ್ಪೀಕರ್ ನೇಮಿಸುವಾಗ ಹಿರಿಯ ಶಾಸಕರನ್ನು ನೇಮಿಸಬೇಕು. ವಿಧಾನಸಭೆಯಲ್ಲಿ ಆರ್.ವಿ.ದೇಶಪಾಂಡೆ ಎಂಟು ಬಾರಿ ಶಾಸಕರಾಗಿದ್ದು, ಅವರನ್ನು ಬಿಟ್ಟು ನಾಲ್ಕು ಬಾರಿ ಶಾಸಕರಾಗಿರುವ ಬೋಪಯ್ಯ ಅವರನ್ನು ಸ್ಪೀಕರ್‍ರನ್ನಾಗಿ ನೇಮಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪರವಾದ ವಕೀಲ ಅಭಿಷೇಕ್ ಸಿಂಘ್ವಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನೊಂದೆಡೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಬಿಜೆಪಿಯ ಹಿರಿಯ ನಾಯಕ ಶೋಭ ಕರಂದ್ಲಾಜೆ, ಕಾಂಗ್ರೆಸ್ ಹತಾಶ ಮನಸ್ಥಿತಿಯಿಂದ ಎಲ್ಲವನೂ ವಿರೋಧ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ರಾಜ್ಯಪಾಲರು ಬೋಪಯ್ಯ ಅವರನ್ನು ನೇಮಿಸಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ.
ಆಪರೇಷನ್ ಕಮಲ ಭೀತಿಯಲ್ಲಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಇಂದೇ ಹಿಂದಿರುಗಲಿದ್ದಾರೆ. ಬಿಜೆಪಿಯಲ್ಲೂ ಕೂಡ ಬಿರುಸಿನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.
104 ಸದಸ್ಯ ಬಲ ಹೊಂದಿರುವ ಬಿಜೆಪಿ, ಬಹುಮತ ಸಾಬೀತಿಗೆ ಯಾವ ಕಸರತ್ತು ನಡೆಸಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.
ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು, ಸಂಜೆ 4 ಗಂಟೆಯವರೆಗೂ ನೂತನ ಶಾಸಕರ ಪ್ರಮಾಣವಚನ ಸಮಾರಂಭ ನಡೆಯಲಿದೆ. ನಂತರ ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ.
ಅಧಿವೇಶನಕ್ಕೆ ಸಕಲ ಸಿದ್ಧತೆ:
ಇಂದು ಪತ್ರಿಕಾಗೋಷ್ಠಿ ನಡೆಸಿ ನಾಳೆಯ ಕಲಾಪದ ಮಾಹಿತಿ ನೀಡಿರುವ ವಿಧಾನಸಭೆಯ ಕಾರ್ಯದರ್ಶಿ ಎಸ್.ಮೂರ್ತಿ ಅವರು, ನಾಳೆ ಕಲಾಪಕ್ಕೆ ಹಾಜರಾಗುವ ನೂತನ ಶಾಸಕರು ತಮ್ಮ ಗುರುತಿನ ಚೀಟಿ ಮತ್ತು ಶಾಸಕರಾಗಿ ಆಯ್ಕೆಯಾಗಿರುವ ಪ್ರಮಾಣ ಪತ್ರವನ್ನು ಜೊತೆಯಲ್ಲಿ ತರಬೇಕು ಎಂದು ಹೇಳಿದ್ದಾರೆ.
ಶಾಸಕರು ಪ್ರಮಾಣವಚನ ಸ್ವೀಕರಿಸಿದ ನಂತರ ಉಳಿದ ಅಧಿಕಾರಗಳು ಪ್ರಾಪ್ತಿಯಾಗುತ್ತವೆ. ಆವರೆಗೂ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ವಿಧಾನಸಭೆಯ ಸಚೇತಕರನ್ನು ನೇಮಿಸಬೇಕಾದರೂ ಅವರು ಪ್ರಮಾಣ ವಚನ ಸ್ವೀಕರಿಸಿರಬೇಕು ಎಂದು ಹೇಳಿದರು.
ಒಂದು ವೇಳೆ ಪ್ರಮಾಣವಚನ ಸ್ವೀಕರಿಸುವ ಮೊದಲು ಶಾಸಕರಿಗೆ ವಿಪ್ ಜಾರಿ ಮಾಡುವ ಪರಿಸ್ಥಿತಿ ಬಂದರೆ ಪಕ್ಷದ ಅಧ್ಯಕ್ಷರೆ ವಿಪ್ ಜಾರಿ ಮಾಡಲು ಅವಕಾಶವಿದೆ ಎಂದು ಮೂರ್ತಿ ತಿಳಿಸಿದ್ದಾರೆ.

ಈ ಮಧ್ಯೆ

ಕೆ.ಜಿ ಬೋಪಯ್ಯ ನೇಮಕವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಗೆ ತುರ್ತು ಅರ್ಜಿಯನ್ನು ಸಲ್ಲಿಸಿದೆ. 

ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಅರ್ಜಿ ಸಲ್ಲಿಸಿದ ಅರ್ಜಿಯಲ್ಲಿ ನಿಯಮದ ಪ್ರಕಾರ ಹಿರಿಯ ಶಾಸಕರನ್ನು  ಹಂಗಾಮಿ ಸ್ಪೀಕರ್ ಆಗಿ ನೇಮಿಸಬೇಕಿತ್ತು, ಅದರಂತೆ ಆರ್.ವಿ ದೇಶಪಾಂಡೆ ಅವರನ್ನ ಹಂಗಾಮಿ ಸ್ಪೀಕರ್ ಮಾಡಬೇಕಿತ್ತು ಎಂದು  ತಿಳಿಸಿದೆ. ಆದರೆ ಕೆ.ಜಿ ಬೋಪಯ್ಯ ಅವರನ್ನು ಸ್ಪೀಕರ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿಲಾಗಿದೆ. ಅಲ್ಲದೆ ನಾಳೆ ಬೋಪಯ್ಯ ನಾಳೆ ವಿಶ್ವಾಸಮತ ಸಾಬೀತು ವೇಳೆ ಪಕ್ಷಪಾತ ಮಾಡಬಹುದಾದ ಸಾಧ್ಯತೆ ಇದ್ದು  ಆದ್ದರಿಂದ ಕೋರ್ಟ್ ಅವರಿಗೆ ನಿಷ್ಪಕ್ಷಪಾತವಾಗಿ  ಕಾರ್ಯ ನಿರ್ವಹಿಸಲು ಸೂಚಿಸಿಬೇಕು ಎಂದು ಕಾಂಗ್ರೆಸ್ ಹೇಳಿದೆ.

ವಿಶ್ವಾಸಮತದ ಸನ್ನಿವೇಶವನ್ನು ಸಂಪೂರ್ಣವಾಗಿ ವೀಡಿಯೋ ರಿಕಾರ್ಡ್ ಮಾಡಬೇಕು ಎಂದು ಸುಪ್ರೀಂಗೆ ಸಲ್ಲಿಸಿರುವ ಅರ್ಜಿಯಲ್ಲಿ  ಕಾಂಗ್ರೆಸ್ ಆಗ್ರಹಿಸಿದೆ.ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಷ್ಕರಿಸಿದೆ ಎನ್ನಲಾಗಿದೆ.

Tags:

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ