ನವದೆಹಲಿ:ಮೇ-18: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಯೋಜನಾ ಕರಡಿಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.
4 ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯನ್ನು ಮುಂಗಾರಿಗೂ ಮೊದಲೇ ಜಾರಿ ಮಾಡುವಂತೆ ತೀರ್ಪಿನಲ್ಲಿ ಸೂಚನೆ ನೀಡಿದೆ.
ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರ ಇರಬೇಕು ಎಂಬ ಪುದುಚೇರಿಯ ಬೇಡಿಕೆಯನ್ನು ಇದೇ ವೇಳೆ ಸುಪ್ರೀಂಕೋರ್ಟ್ ಪುರಸ್ಕರಿಸಿದ್ದು, ಜಲಾಶಯಗಳು ಆಯಾ ರಾಜ್ಯಗಳ ಸುಪರ್ದಿಯಲ್ಲಿಯೇ ಇರಲಿವೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಪರಿಷ್ಕ್ರತ ಯೋಜನೆಯು ನೀರು ಹಂಚಿಕೆ ಸಂಬಂಧ ಪ್ರತಿದಿನ ಹರಿದು ಹೋದ ನೀರಿನ ಮಾಹಿತಿನಯನ್ನು ತಿಂಗಳಿಗೊಮ್ಮೆ ಸಂಗ್ರಹಿಸಲು ಪ್ರಾಧಿಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಕೆಲ ದಿನ ಹಿಂದಷ್ಟೇ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ಸ್ಕೀಂ ಕರಡು ನಿರ್ಣಯವನ್ನು ಸುಪ್ರೀಂಕೋರ್ಟ್’ಗೆ ಸಲ್ಲಿಸಿತ್ತು. ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರ, ರಾಜ್ಯದಲ್ಲಿ ಪ್ರಸ್ತುತ ಸರ್ಕಾರವಿಲ್ಲದ ಹಿನ್ನಲೆಯಲ್ಲಿ ಸ್ಕೀಮ್’ನ ಕರಡಿಗೆ ಆಕ್ಷೇಪ ಸಲ್ಲಿಸಲು ತನಗೆ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು.
ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಸ್ಕೀಮ್ ರಚನೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಮಾತ್ರವಿದೆ ಎಂದು ತಿಳಿಸಿತ್ತು. ವಾದ ಪ್ರತಿವಾದದ ಬಳಿಕ ನ್ಯಾಯಾಲಯ ಸ್ಕೀಂ ಕುರಿತ ತನ್ನ ತೀರ್ಪನ್ನು ಕಾದಿರಿಸಿತ್ತು.
ಇದರಂತೆ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕರಡಿಗೆ ಹಸಿರು ನಿಶಾನೆ ತೋರಿದೆ.