ಬೆಂಗಳೂರು:ಮೇ-18: ನೂತನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸರಣಿ ಸಭೆಗಳಲ್ಲಿ ತೊಡಗಿದ್ದಾರೆ. ತಡರಾತ್ರಿವರೆಗೂ ಬಿಜೆಪಿ ಮುಂದಿನ ನಡೆ ಬಗ್ಗೆ ನಾಯಕರೊಂದಿಗೆ ಚರ್ಚೆ ನಡೆಸಿದ ಬಿಎಸ್ವೈ, ಇಂದು ಬೆಳಗ್ಗೆ ರಾಜ್ಯದ ಸ್ಥಿತಿಗತಿ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ನಿನ್ನೆ ರಾತ್ರಿ ಖಾಸಗಿ ಹೋಟೆಲ್ನಲ್ಲಿ ಸುಪ್ರೀಂ ತೀರ್ಪಿನ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರರಾವ್, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದಗೌಡ ಸೇರಿದಂತೆ ಪ್ರಮುಖ ನಾಯಕರೊಂದಿಗೆ ತಡರಾತ್ರಿವರೆಗೂ ಮಾತುಕತೆ ನಡೆಸಿದರು.
ಸುಪ್ರೀಂ ಕೋರ್ಟ್ ತರಾತುರಿಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಿದರೆ ಯಾವ ರೀತಿ ಮುಂದುವರೆಯಬೇಕು, ಯಾರಿಗೆಲ್ಲಾ ಯಾವ ಜವಾಬ್ದಾರಿ ವಹಿಸಬೇಕು ಎನ್ನುವ ಕುರುತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಪಕ್ಷದ ಉನ್ನತ ಮೂಲಗಳ ಪ್ರಕಾರ ಉಮೇಶ್ ಕತ್ತಿ, ಜಗದೀಶ್ ಶೆಟ್ಟರ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ಗೆ ಶಾಸಕರನ್ನು ಕರೆತರುವ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಅದರ ಬೆನ್ನಲ್ಲೇ ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರನ್ನು ಡಾಲರ್ಸ್ ಕಾಲೋನಿ ನಿವಾಸಕ್ಕೆ ಕರೆಸಿಕೊಂಡಿರುವ ಯಡಿಯೂರಪ್ಪ, ರಾಜ್ಯದ ಹಣಕಾಸು ಪರಿಸ್ಥಿತಿ, ಸಾಲಮನ್ನಾ ಮಾಡಿದರೆ ಬೊಕ್ಕಸಕ್ಕೆ ಆಗುವ ಹೊರೆ, ವೇತನ ಪಾವತಿಗೆ ಆಗುವ ತೊಂದರೆ, ಯಾವ ರೀತಿ ಆರ್ಥಿಕ ಸಂಪನ್ಮೂಲದ ಕ್ರೂಢೀಕರಣ ಸಾಧ್ಯ ಎನ್ನುವ ಕುರುತು ಮಾತುಕತೆ ನಡೆಸಿದರು.
ಹಾಗೆಯೇ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ. ಎನ್.ರಾಜು ಅವರನ್ನು ಕರೆಸಿಕೊಂಡು ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾಹಿತಿ ಪಡೆದುಕೊಂಡರು.