ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯರಾತ್ರಿಯಿಂದ ಮುಂಜಾನೆವರೆಗೆ ನಡೆದ ವಾದ-ಪ್ರತಿವಾದ : ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ಇಲ್ಲ ಎಂದ ಕೋರ್ಟ್

ಹೊಸದಿಲ್ಲಿ,ಮೇ 17

ಬಿಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಇದ್ದ ಅಡ್ಡಿ ಆತಂಕಗಳನ್ನು ಸುಪ್ರೀಂ ಕೋರ್ಟ್‌ ನಿವಾರಿಸಿದೆ. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ಸುಪ್ರೀಂ ಕೋರ್ಟ್‌ ಗ್ರೀನ್ ಸಿಗ್ನಲ್‌ ನೀಡಿತ್ತು, ರಾಜ್ಯಪಾಲರು ನಿಗದಿ ಮಾಡಿರುವಂತೆಯೇ ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

ಬುಧವಾರ ತಡ ರಾತ್ರಿಯಿಂದ ಮುಂಜಾನೆವರೆಗೂ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಈ ಮೂಲಕ ಮಹತ್ವದ ಆದೇಶವನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೊರಡಿಸಿದೆ. ಯಾವುದೇ ಕಾರಣಕ್ಕೂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಪೀಠ ಸಲಹೆ ಮಾಡಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸಮ್ಮತಿಸಿರುವ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಧ್ಯರಾತ್ರಿ 1.45ಕ್ಕೆ ಆರಂಭಿಸಿತ್ತು. ಇದಕ್ಕಾಗಿ ತ್ರಿಸದಸ್ಯ ಪೀಠವನ್ನು ರಚನೆ ಮಾಡಲಾಗಿತ್ತು. ನ್ಯಾಯಮೂರ್ತಿ ಎಕೆ ಸಿಕ್ರಿ, ಅಶೋಕ್ ಭೂಷಣ್ ಮತ್ತು ಬೋಬ್ಡೆ ಸೇರಿದ ಪೀಠದಿಂದ ಸುಪ್ರೀಂ ಕೋರ್ಟ್‌ನ ಹಾಲ್ ನಂಬರ್ 6ರಲ್ಲಿ ಸುದೀರ್ಘ ವಿಚಾರಣೆ ಸಾಗಿತ್ತು. ಕಾಂಗ್ರೆಸ್‌ ಹಾಗೂ ಜೆಡಿಎಸ್ ಪರವಾಗಿ ಅಭಿಷೇಕ್‌ ಮನು ಸಿಂಘ್ವಿ ಮತ್ತು ಕೇಂದ್ರದ ಪರ ವಕೀಲ ತುಷಾರ್ ಮೆಹ್ತಾ ಹಾಗೂ ಬಿಜೆಪಿ ಪರ ಮುಕುಲ್ ರೋಹಟಗಿ ವಾದವನ್ನು ಮಂಡಿಸಿದ್ದರು.

ಕರ್ನಾಟಕ ರಾಜಕೀಯ ಇತಿಹಾಸದಲ್ಲಿಯೇ ಅತ್ಯಂತ ನಾಟಕೀಯ ಬೆಳವಣಿಗೆಗಳನ್ನು ಕಂಡ ದಿನವಾಗಿದೆ. ಮೇ 16 ಮತ್ತು 17 ಇತಿಹಾಸದಲ್ಲಿ ದಾಖಲಾಗಿದೆ. ಇಡೀ ದಿನವೂ ರಾಜಕೀಯ ಬೆಳವಣಿಗೆ ಕಂಡ ನಂತರ ಮಧ್ಯರಾತ್ರಿಯಲ್ಲಿ ಕಾನೂನು ಸಮರಕ್ಕೆ ಸಾಕ್ಷಿಯಾಯಿತು.

ತ್ವರಿತ ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್‌ ಜೆಡಿಎಸ್‌ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಪೀಠ ವಿಚಾರಣೆ ಆರಂಭಿಸಿತು.

ಜೆಡಿಎಸ್‌, ಕಾಂಗ್ರೆಸ್‌ ಪರ 117 ಶಾಸಕರ ಸಹಿ ಇರುವ ಪತ್ರ ಇದೆ. ಮೈತ್ರಿ ಸರಕಾರಕ್ಕೆ ಬಹುಮತ ಇದ್ದರೂ 104 ಸ್ಥಾನ ಹೊಂದಿರುವ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಲಾಗಿದೆ. ಹಾಗಾಗಿ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆ ನೀಡಬೇಕೆಂದು ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಸುಪ್ರೀಂ ಕೋರ್ಟ್‌ ಆವರಣ ಮಾಧ್ಯಮಪ್ರತಿನಿಧಿಗಳು ಹಾಗೂ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ನಾಯಕರಿಂದ ತುಂಬಿತ್ತು. ಅತ್ತ ಸಂಸತ್ ಎದುರುಗಡೆ ಯೂತ್ ಕಾಂಗ್ರೆಸ್, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಭಾವಚಿತ್ರಗಳಿಗೆ ಬೆಂಕಿ ಹಂಚಿ ಪ್ರತಿಭಟನೆಯನ್ನು ನಡೆಸಿದರು.

ರಾಜ್ಯದಲ್ಲಿ ರಾಜಕೀಯ ನಿರ್ವಾತ ಸೃಷ್ಟಿಯಾಗುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿತ್ತು. ಇದಕ್ಕೆ ಪ್ರತಿಯಾಗಿ ಸಿಂಘ್ವಿ ಮೇಘಾಲಯ, ಮಣಿಪುರ, ಗೋವಾದಲ್ಲಿ ಚುನಾವಣಾ ನಂತರ ಮೈತ್ರಿ ಪಕ್ಷಗಳಿಗೆ ಸರಕಾರ ರಚಿಸಲು ಅವಕಾಶ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಹಂಗಾಮಿ ಸರಕಾರ ಇದೆ, ನಿರ್ವಾತ ಸ್ಥಿತಿ ಇಲ್ಲ ಎಂದು ಸಿಂಘ್ವಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

ಜಮ್ಮು ಕಾಶ್ಮೀರ ಹೊಸದಿಲ್ಲಿಯಲ್ಲಿಯೂ ಮೈತ್ರಿ ಪಕ್ಷಗಳಿಗೆ ಸರಕಾರ ರಚನೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಅಭಿಷೇಕ್‌ ಸಿಂಘ್ವಿ ಇತ್ತೀಚಿನ ಉದಾಹರಣೆಗಳನ್ನು ನ್ಯಾಯಪೀಠದ ಮಂಡಿಸಿದರು. ಮಧ್ಯರಾತ್ರಿ ಮೂರು ಗಂಟೆಯವರೆಗೂ ಅಭಿಷೇಕ್‌ ಮನು ಸಿಂಘ್ವಿ ವಾದ ಮುಂದುವರಿಸಿದರು.

ಅತಿ ದೊಡ್ಡ ಪಕ್ಷವನ್ನು ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟ ರಾಜ್ಯಪಾಲರ ನಿರ್ಧಾರ ದೋಷಪೂರಿತವಾಗಿದೆ. ಈ ಹಿಂದೆಯೂ ರಾಜ್ಯಪಾಲರ ಆದೇಶವನ್ನು ತಡೆ ಹಿಡಿಯಲಾಗಿತ್ತು ಎಂದು ಸಿಂಘ್ವಿ ತಿಳಿಸಿದರು. ಆಧರೆ ರಾಜ್ಯಪಾಲರನ್ನು ನಿಗ್ರಹಿಸುವುದು ಅಥವಾ ಅವರ ಕಾರ್ಯಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಬಿಜೆಪಿಗೆ ರಾಜ್ಯಪಾಲರು ನೀಡಿದ ಪತ್ರವನ್ನು ನೀಡಿಲ್ಲ ಎಂದು ನ್ಯಾಯಪೀಠ ತಿಳಿಸಿತು. ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ನೀಡಿದ ಸರಕಾರ ರಚನೆ ಆಹ್ವಾನ ಪತ್ರವನ್ನು ಸಿಂಘ್ವಿ ಕೊನೆಗೂ ನ್ಯಾಯಪೀಠದ ಮುಂದೆ ಸಲ್ಲಿಸಿದರು. ಆದರೆ ಕೇವಲ ಸಂಶಯದ ಆಧಾರದ ಮೇಲೆ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇಬ್ಬರು ಶಾಸಕರ ಪರವಾಗಿ ತಾವು ಮಂಡಿಸುವುದಾಗಿ ಹಿರಿಯ ವಕೀಲ ಮುಕುಲ್‌ ರೋಹ್ಟಗಿ ತಿಳಿಸಿದರು. ಮಧ್ಯರಾತ್ರಿಯಲ್ಲಿ ವಿಚಾರಣೆ ನಡೆಸುವ ಅಗತ್ಯವೂ ಇರಲಿಲ್ಲ, ಬಹುಮತ ಸಾಬೀತುಪಡಿಸುವ ವಿಷಯವನ್ನು ಬೆಳಗಿನ ಜಾವ ನಾಲ್ಕು ಗಂಟೆಗೆ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಮುಕುಲ್‌ ರೋಹ್ಟಗಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಬಳಿ ಶಾಸಕರ ಸಹಿ ಇರುವ ಪತ್ರ ಇದೆ. ಅವರ ಬಳಿ ಬಹುಮತವೂ ಇದೆ. ಹೀಗಿದ್ದಾಗ ಬಿಜೆಪಿ ಬಹುಮತ ಹೇಗೆ ಸಾಬೀತುಪಡಿಸುತ್ತದೆ ಎಂದು ಅಟಾರ್ನಿ ಜನರಲ್‌ಗೆ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ಈ ಸಹಿಗಳು ಅಸಲಿ ಅಲ್ಲದಿರಬಹುದು ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅಟಾರ್ನಿ ಜನರಲ್‌ ಸ್ಪಷ್ಟಪಡಿಸಿದ್ದಾರೆ.

ಬಹುಮತ ಸಾಬೀಪಡಿಸಲು ಹದಿನೈದು ದಿನಗಳ ಅವಶ್ಯಕತೆ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಇದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಷಯ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅಟಾರ್ನಿ ಜನರಲ್‌ ತಿಳಿಸಿದ್ದಾರೆ.

ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನೀಡಿರುವ ಗಡುವನ್ನು ಕಡಿತಗೊಳಿಸಬಹುದು ಎಂದು ಅಟಾರ್ನಿ ಜನರಲ್‌ ಸ್ಪಷ್ಟಪಡಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದ ನಂತರ ಬಹುಮತ ಸಾಬೀತು ವಿಷಯದ ವಿಚಾರಣೆ ನಡೆಸಬಹುದು ಎಂದು ಪ್ರತಿವಾದ ಮಂಡಿಸಲಾಗಿದೆ.

ರಾಜ್ಯಪಾಲರು ಈಗಾಗಲೇ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಕರ್ತವ್ಯವನ್ನು ಪೂರೈಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಮುಕುಲ್‌ ರೋಹ್ಟಗಿ ತಿಳಿಸಿದ್ದಾರೆ. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ಮುಕುಲ್ ರೋಹ್ಟಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬೇಕಿದ್ದರೆ ಸುಪ್ರೀಂ ಕೋರ್ಟ್‌ ಕಿತ್ತು ಹಾಕಬಹುದು ಆದರೆ ಪ್ರಮಾಣವಚನ ಸ್ವೀಕಾರವನ್ನು ತಡೆಯಲು ಸಾಧ್ಯವಿಲ್ಲ ಎಂದು ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.

ಕೊನೆಗೆ ವಾದ ಪ್ರತಿ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಪ್ರಮಾಣ ವಚನಕ್ಕೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂಬ ಸಲಹೆಯನ್ನು ನೀಡಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ