ಕಾಂಗ್ರೆಸ್‌ ಮತ್ತು ಜೆಡಿಎಸ್‌‌ ಶಾಸಕರಿಗೆ ಐಟಿ, ಇಡಿ ಮೂಲಕ ಬಿಜೆಪಿ ಬೆದರಿಕೆ: ಬಿಜೆಪಿಗೆ ಬೆಂಬಲ ಸೂಚಿಸುವಂತೆ ಒತ್ತಾಯ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:ಮೇ-17; ರಾಜಭವನವನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಜೆಡಿಎಸ್‌‌ ರಾಜಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನಗರದ ಶಾಂಗ್ರಿಲಾ ಹೋಟೆಲ್‌ ಬಳಿ ಕುಮಾರಸ್ವಾಮಿ ಮಾತನಾಡಿ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು. ಕೇಂದ್ರದ ಬಿಜೆಪಿ ಐಟಿ, ಇಡಿ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌‌ ಶಾಸಕರಿಗೆ ಐಟಿ, ಇಡಿ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಇಡಿ ಮೂಲಕ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರನ್ನು ಹೆದರಿಸಿ ಬಿಜೆಪಿಗೆ ಬೆಂಬಲ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ರಾಜ್ಯಪಾಲರು ಅಸಂವಿಧಾನಿಕ ನಿರ್ಧಾರ ಕೈಗೊಂಡಿದ್ದಾರೆ. ಬಹುಮತ ಸಾಬೀತು ಪಡಿಸಲು ಬಿಜೆಪಿ 15 ದಿನಗಳ ಕಾಲಾವಕಾಶ ನೀಡಿರುವುದು ಸಂವಿಧಾನಬಾಹಿರ ಎಂದರು. ಸ್ವಚ್ಛ ಭಾರತ ಮಾಡುವುದಾಗಿ ಹೇಳುತ್ತಿರುವ ನರೇಂದ್ರಮೋದಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದು, ವಾಮಮಾರ್ಗದ ಮೂಲಕ ಅಧಿಕಾರ ಪಡೆಯುತ್ತಿದೆ. ನಾವು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಲಿದ್ದೇವೆ. ರಾಜಭವನದ ಮುಂದೆ ಶಾಸಕರ ಪರೇಡ್‌ ಮಾಡಿಸುತ್ತೇವೆ ಎಂದು ತಿಳಿಸಿದರು.

ಬಿಜೆಪಿ ಯಾವ ರೀತಿ ಪ್ರಜಾಪ್ರಭುತ್ವವನ್ನು ನಾಶ ಪಡಿಸುತ್ತಿದೆ ಎಂದು ಜನತೆಗೆ ತಿಳಿಯಬೇಕಿದೆ. ಈ ಸಂಬಂಧ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ಜೊತೆ ಸಂಪರ್ಕದಲ್ಲಿದ್ದು, ಮೋದಿ, ಶಾರಿಂದ ಪ್ರಜಾಪ್ರಭುತ್ವ ರಕ್ಷಿಸಲು ನೆರವು ಕೋರಿದ್ದೇನೆ. ಬಿಜೆಪಿ ದಮನಕಾರಿ ನೀತಿಯನ್ನು ಖಂಡಿಸಲು ರಾಷ್ಟ್ರದ ಎಲ್ಲಾ ವಿರೋಧಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರು ಕೈಜೋಡಿಸುವಂತೆ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ಅಲ್ಲದೇ ರಾಜ್ಯದ ಜನತೆ ಕೂಡ ಬಿಜೆಪಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಬೇಕೆಂದು ಕುಮಾರಸ್ವಾಮಿ ಕರೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ