ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಣೆ

 

ನವದೆಹಲಿ, ಮೇ 17-ಕರ್ನಾಟಕ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿನ್ನೆ ಮಧ್ಯರಾತ್ರಿ ನಿರಾಕರಿಸಿದೆ. ಸರ್ವೋಚ್ಛ ನ್ಯಾಯಾಲಯದ ಮಹತ್ವದ ತೀರ್ಪಿನಿಂದಾಗಿ ಬೆಳಗ್ಗೆ ಬೆಂಗಳೂರಿನಲ್ಲಿ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿರ್ವಿಘ್ನವಾಗಿ ನೆರವೇರಿದೆ.

ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ತುರ್ತು ಅರ್ಜಿಯ ಕುರಿತು ಮಧ್ಯರಾತ್ರಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಿಎಸ್‍ವೈ ಮುಖ್ಯಮಂತ್ರಿಯಾಗಲು ಗ್ರೀನ್ ಸಿಗ್ನಲ್ ನೀಡಿ, ರಾಜ್ಯಪಾಲ ವಿ.ಆರ್.ವಾಲಾ ಅವರ ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಕಾನೂನು ಸಮರದಲ್ಲಿ ಭಾರೀ ಹಿನ್ನಡೆಯಾಗಿದೆ.

ಸುಪ್ರೀಂಕೋರ್ಟ್‍ನ ಕೊಠಡಿ ಸಂಖ್ಯೆ 6ರಲ್ಲಿ 2.11ರ ನಸುಕಿನಲ್ಲಿ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠ, ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿತು. ಸತತ ವಿಚಾರಣೆ ಬಳಿಕ ಮುಂಜಾನೆ 5.28ರಲ್ಲಿ ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಇದರಿಂದಾಗಿ ಬಿಎಸ್‍ವೈ ಪ್ರಮಾಣ ವಚನಕ್ಕೆ ಹಾದಿ ಸುಗಮವಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕರಿಸುವುದನ್ನೂ ಹೇಗಾದರೂ ಮಾಡಿ ತಡೆಯಬೇಕೆಂಬ ಕಾಂಗ್ರೆಸ್ ಮತ್ತು ಜೆಡಿಎಸ್ ಕಟ್ಟಕಡೆಯ ಪ್ರಯತ್ನ ವಿಫಲಗೊಂಡಿತು.

ಬಿ.ಎಸ್.ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆಯಾಜ್ಞೆ ನೀಡುವ ಯಾವುದೇ ಆದೇಶವನ್ನು ಈ ನ್ಯಾಯಾಲಯ ನೀಡುವುದಿಲ್ಲ. ಈ ಪ್ರಕರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲು ಅವಕಾಶ ನೀಡುತ್ತೇವೆ. ಕರ್ನಾಟಕದಲ್ಲಿ ಪ್ರಮಾಣ ವಚನ ಸ್ವೀಕಾರ ಮತ್ತು ಸರ್ಕಾರ ರಚನೆ ಈ ಪ್ರಕರಣದಲ್ಲಿ ಉದ್ಭವಿಸುವ ಅಂತಿಮ ಫಲಶ್ರುತಿಯನ್ನು ಆಧರಿಸಿರುತ್ತದೆ ಎಂದು ವಿಶೇಷ ನ್ಯಾಯಪೀಠ ಹೇಳಿತು.

ಇದಕ್ಕೂ ಮುನ್ನ ಕಾಂಗ್ರೆಸ್-ಜೆಡಿಎಸ್ ಪರ ವಕೀಲರು ಹಾಗೂ ಬಿಜೆಪಿ ಪರ ನ್ಯಾಯವಾದಿಗಳ ನಡುವೆ ವಾದ-ಪ್ರತಿವಾದ ನಡೆಯಿತು.

ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆಯಾಜ್ಞೆ ನೀಡಬೇಕು ಅಥವಾ ಮುಂದೂಡಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ಆದರೆ, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ(ಬಿಜೆಪಿ ಶಾಸಕರಾದ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ಮತ್ತು ಬಸವರಾಜ ಬೊಮ್ಮಾಯಿ ಪರ ನ್ಯಾಯವಾದಿ) ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರ ರಚನೆ ವಿಚಾರದಲ್ಲಿ ಯಾವ ಪಕ್ಷವನ್ನು ಆಹ್ವಾನಿಸಬೇಕೆಂದು ರಾಜ್ಯಪಾಲರ ಪರಮಾಧಿಕಾರ. ತಮ್ಮ ವಿವೇಚನೆ ಮೇರೆಗೆ ಅವರು ಯಾವುದೇ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು. ಚುನಾವಣಾ ಫಲಿತಾಂಶದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಸರ್ಕಾರ ರಚನೆ ಆಮಂತ್ರಿಸಿ, ಯಡಿಯೂರಪ್ಪ ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡುವುದು ಸಂವಿಧಾನಾತ್ಮಕವಾಗಿದೆ ಎಂದು ವೇಣುಗೋಪಾಲ್ ಮತ್ತು ರೋಹಟಗಿ ಸಮರ್ಥಿಸಿಕೊಂಡರು.

ವಾದ-ಪ್ರತಿವಾದಗಳ ನಂತರ ಸುಪ್ರೀಂಕೋರ್ಟ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿ ಯಡಿಯೂರಪ್ಪ ಸಿಎಂ ಆಗಲು ಹಸಿರು ನಿಶಾನೆ ತೋರಿತು.

ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಮೇ 15 ಮತ್ತು 16ರಂದು ನೀಡಿರುವ ಪತ್ರಗಳೊಂದಿಗೆ ನಾಳೆ ಬೆಳಗ್ಗೆ 10.30ಕ್ಕೆ ಕೇಂದ್ರ ಸರ್ಕಾರ ಮತ್ತು ಯಡಿಯೂರಪ್ಪ ಪರವಾಗಿ ಕೋರ್ಟ್‍ಗೆ ಹಾಜರಾಗಬೇಕೆಂದು ವಿಶೇಷ ನ್ಯಾಯಪೀಠವು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ನಿರ್ದೇಶನ ನೀಡಿದೆ.

ಸುಪ್ರೀಂಕೋರ್ಟ್ ಆದೇಶದ ಮುಖ್ಯಾಂಶಗಳು

qನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ವಿರಳ ವಿದ್ಯಮಾನ, ಮಧ್ಯರಾತ್ರಿ ನಂತರ ನಡೆದ ತುರ್ತು ವಿಚಾರಣೆ.

qಸುಪ್ರೀಂಕೋರ್ಟ್‍ನ ಕೊಠಡಿ ಸಂಖ್ಯೆ 6ರಲ್ಲಿ ನಸುಕು 2.11 ರಿಂದ ಮುಂಜಾನೆ 5.28ರವರೆಗೆ ದೀರ್ಘ ವಿಚಾರಣೆ.

qನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠದಿಂದ ವಾದ-ಪ್ರತಿವಾದ ಆಯ್ಕೆ.

qಕಾಂಗ್ರೆಸ್-ಜೆಡಿಎಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ.

qಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹಾಗೂ ಹಿರಿಯ ವಕೀಲ ಮುಕುಲ್ ರೋಹಟಗಿ(ಬಿಜೆಪಿ ಶಾಸಕರಾದ ಗೋವಿಂದ ಕಾರಜೋಳ, ಸಿ.ಎಂ.ಉದಾಸಿ ಮತ್ತು ಬಸವರಾಜ ಬೊಮ್ಮಾಯಿ ಪರ ನ್ಯಾಯವಾದಿ) ಪ್ರತಿವಾದ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ