ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಪ್ರತಿಭಟನೆ

 

ಬೆಂಗಳೂರು, ಮೇ 17- ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರು ಶಕ್ತಿ ಪ್ರದರ್ಶನ ಮಾಡಿದರು. ಬಿಡದಿಯ ಈಗಲ್‍ಟನ್ ರೆಸಾರ್ಟ್‍ನಲ್ಲಿದ್ದ ಶಾಸಕರು ಬಸ್‍ನಲ್ಲಿ ಬಂದು ಗಾಂಧಿ ಪ್ರತಿಮೆ ಬಳಿ ಒಗ್ಗಟ್ಟು ಪ್ರದರ್ಶಿಸಿದರು.

ಕಾಂಗ್ರೆಸ್‍ನ 76 ಶಾಸಕರು, ಪಕ್ಷೇತರರು ಇಬ್ಬರು ಸೇರಿದಂತೆ 78 ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಉಳಿದ ಇಬ್ಬರು ಶಾಸಕರಾದ ಪ್ರತಾಪ್‍ಗೌಡ ಪಾಟೀಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಾಸಕ ಆನಂದ್‍ಸಿಂಗ್ ಅವರು ಪ್ರತಿಭಟನೆಗೆ ಬಂದಿರಲಿಲ್ಲ. ಒಟ್ಟಾರೆ 78 ಜನ ಪ್ರತಿಭಟನೆಯಲ್ಲಿ ಭಾಗವಹಿಸಿ ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಅವರಿಗೆ ಬಹುಮತದ ಕೊರತೆ ಇದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಹಲವು ಶಾಸಕರನ್ನು ಹೈಜಾಕ್ ಮಾಡುವ ಸಾಧ್ಯತೆ ಇರುವುದರಿಂದ ಅಲ್ಲಿಯವರೆಗೆ ಶಾಸಕರನ್ನು ಇಟ್ಟುಕೊಳ್ಳುವುದು ಪ್ರಾಯಾಸವಾಗಲಿದೆ.

ಜೆಡಿಎಸ್ ಶಾಸಕರೆಲ್ಲಾ ಒಟ್ಟಾಗಿದ್ದು, ಕಾಂಗ್ರೆಸ್ ಶಾಸಕರೂ ಕೂಡ ಒಟ್ಟಾಗಿಯೇ ಬಂದು ಪ್ರತಿಭಟನೆ ಮಾಡುವ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಮಧ್ಯಾಹ್ನ ನೂತನ ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರ ಹಕ್ಕು ಮಂಡನೆ ಸಂಬಂಧ ರಾಜ್ಯಪಾಲರಿಗೆ ಸಲ್ಲಿಸಿರುವ ಪತ್ರಗಳು ಹಾಗೂ ತಮ್ಮ ಪಕ್ಷದ ಸಂಖ್ಯಾಬಲದ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಬೇಕಾಗಿದೆ. ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಏನಾಗಲಿದೆ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ