ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪದಗ್ರಹಣ

 

ಬೆಂಗಳೂರು, ಮೇ 17- ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಇಂದು ಪದಗ್ರಹಣ ಮಾಡಿದರು.

ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಅವರು ಯಡಿಯೂರಪ್ಪನವರಿಗೆ ಪ್ರಮಾಣ ವಚನ ಗೌಪ್ಯತೆ ಬೋಧಿಸಿದರು.

ಶ್ವೇತ ವಸ್ತ್ರಧಾರಿಯಾಗಿದ್ದ ಯಡಿಯೂರಪ್ಪನವರು ಹಸಿರು ಶಾಲು ಹೊದ್ದು ಬಂದು ದೇವರು ಮತ್ತು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇಂದು ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಮಾತ್ರ ಅಧಿಕಾರ ವಹಿಸಿಕೊಂಡರು. ಈ ಮುನ್ನ 2007ರ ನವೆಂಬರ್ 12ರಲ್ಲಿ ಪ್ರಥಮ ಬಾರಿಗೆ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದರು. ಒಂದು ವಾರ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತದನಂತರ 2008ರ ಮೇ 3ರಂದು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೂರು ವರ್ಷ 10 ತಿಂಗಳು ಆಡಳಿತ ನಡೆಸಿದ್ದರು. ಪ್ರಸ್ತುತ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಇದಕ್ಕೂ ಮುನ್ನ ಅವರು ತಮ್ಮ ನಿವಾಸದಿಂದ ಆಪ್ತರು ಹಾಗೂ ಬೆಂಬಲಿಗರೊಂದಿಗೆ ಸಂಜಯ್ ನಗರದ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ರಾಜಭವನಕ್ಕೆ ಆಗಮಿಸಿ ಪದಗ್ರಹಣ ಮಾಡಿದರು.

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಅನಂತಕುಮಾರ್, ಸದಾನಂದಗೌಡ, ಪಕ್ಷದ ಉಸ್ತುವಾರಿ ಮುರಳಿಧರ್ ರಾವ್, ಸಂಸದರು, ನೂತನ ಶಾಸಕರು, ಪಕ್ಷದ ವರಿಷ್ಠರು, ಅಲ್ಲದೆ, ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ, ರಾಜ್ಯ ಪೆÇಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು, ಅನೇಕ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

ಬಿ.ಎಸ್.ಯಡಿಯೂರಪ್ಪನವನಾದ ನಾನು ಎಂದು ಹೇಳುತ್ತಿದ್ದಂತೆ ಗಾಜಿನ ಮನೆಯಲ್ಲಿ ಅಭಿಮಾನಿಗಳಿಂದ ಹರ್ಷೋದ್ಘಾರ ಮೊಳಗಿತು. ಯಡಿಯೂರಪ್ಪನವರಿಗೆ ಹಾಕುತ್ತಿದ್ದ ಜೈಕಾರ ಮುಗಿಲು ಮುಟ್ಟಿತ್ತು.

ಅತ್ತ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ಪ್ರಮಾಣ ವಚನ ಸ್ವೀಕಾರ ಅಸಂವಿಧಾನಿಕವಾಗಿದೆ ಎಂದು ಪ್ರತಿಭಟನೆ ನಡೆಸಿದರು.

ತಡರಾತ್ರಿ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದವು. ಬಹುಮತವಿಲ್ಲದ ಬಿ.ಎಸ್.ಯಡಿಯೂರಪ್ಪನವರಿಗೆ ಅಧಿಕಾರ ಸ್ವೀಕಾರಕ್ಕೆ ಅವಕಾಶ ಕೊಟ್ಟ ರಾಜ್ಯಪಾಲರ ಕ್ರಮ ಆಕ್ಷೇಪಿಸಿ ಕಾಂಗ್ರೆಸ್, ಜೆಡಿಎಸ್‍ನವರು ನ್ಯಾಯಾಲಯದ ಮೊರೆ ಹೋಗಿದ್ದರು.

ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿರಾತಂಕವಾಗಿ ನೆರವೇರಿತು.

ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿರುವ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ನೀಡಿರುವ ಪತ್ರಗಳೊಂದಿಗೆ ನಾಳೆ ಬೆಳಗ್ಗೆ ಕೇಂದ್ರ ಸರ್ಕಾರ ಮತ್ತು ಯಡಿಯೂರಪ್ಪ ಪರವಾಗಿ ಕೋರ್ಟ್‍ಗೆ ಹಾಜರಾಗಬೆಕೆಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ವಿಶೇಷ ನ್ಯಾಯ ಪೀಠ, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ನಿರ್ದೇಶನ ನೀಡಿದೆ.

104 ಸದಸ್ಯ ಬಲ ಹೊಂದಿರುವ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಆದ ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಅವಕಾಶ ನೀಡದ ರಾಜ್ಯಪಾಲರ ಕ್ರಮವನ್ನು ಈ ಪಕ್ಷಗಳು ಆಕ್ಷೇಪಿಸಿ ನ್ಯಾಯಾಲಯದ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಬಿಎಸ್‍ವೈಗೆ ಕಾನೂನು ಕಂಟಕವೂ ಎದುರಾಗಿದೆ.

ಯಾವ ರೀತಿ ಬಹುಮತ ಸಾಬೀತುಪಡಿಸಲಿದ್ದಾರೆ, ನ್ಯಾಯಾಲಯದಲ್ಲಿ ಯಾವ ತೀರ್ಪು ಬರಲಿದೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ