ನರಸಿಂಹರಾಜ ಕ್ಷೇತ್ರದಲ್ಲಿ ಇವಿಎಂ ಹ್ಯಾಕ್: ಸೋತ ಅಭ್ಯರ್ಥಿಗಳ ಪ್ರತಿಭಟನೆ

ಮೈಸೂರು, ಮೇ 17- ಈ ಬಾರಿ ನಡೆದ ಚುನಾವಣೆಯಲ್ಲಿ ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಇವಿಎಂ ಹ್ಯಾಕ್ ಆಗಿತ್ತೆಂದು ಆರೋಪಿಸಿ ಎಸ್‍ಡಿಪಿಐ ಸೇರಿದಂತೆ ಸೋತ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು.
ಎನ್‍ಆರ್ ಪೆÇಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ ಸೋತ ಅಭ್ಯರ್ಥಿಗಳು ಇವಿಎಂ ಹ್ಯಾಕ್ ಆಗಿದ್ದರಿಂದಲೇ ತನ್ವೀರ್ ಸೇಠ್ ಜಯ ಗಳಿಸಿದ್ದಾರೆಂದು ದೂರಿದ್ದಾರೆ.
ರಾತ್ರಿಯಿಂದ ಬೆಳಗಿನವರೆಗೂ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಈ ಹಗರಣದಲ್ಲಿ ವಿದೇಶಿಗನೊಬ್ಬನ ಕೈವಾಡವಿದೆ. ಆತನ ಮೂಲಕ ಎನ್‍ಆರ್ ಮೊಹಲ್ಲಾದ ಕೆಲವು ಬೂತ್‍ಗಳಲ್ಲಿ ಇವಿಎಂ ಹ ಯಾಕ್ ಮಾಡಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಅಭಿರಾಮ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮೈಸೂರು ಜಿಲ್ಲೆಯಾದ್ಯಂತ ಯಾವುದೇ ಇವಿಎಂ ಹ್ಯಾಕ್ ಆಗಿಲ್ಲ. ಮತಯಂತ್ರಗಳಿಗೆ ಸಂಬಂಧಪಟ್ಟ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಿಯೇ ಮತ ಎಣಿಕೆ ಮಾಡಲಾಗಿದೆ. ಯಾವುದೇ ಮತಯಂತ್ರಗಳಲ್ಲಿ ಲೋಪದೋಷಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ವರದಿ ಆಧರಿಸಿ ಕೇಂದ್ರ ಚುನಾವಣಾ ಆಯೋಗ ಅಭ್ಯರ್ಥಿಗಳ ಗೆಲುವನ್ನು ದೃಢಪಡಿಸಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನಾಕಾರರ ಆರೋಪ ಸತ್ಯಕ್ಕೆ ದೂರವಾದುದು ಎಂದು ಅಭಿರಾಮ್ ತಿಳಿಸಿದರು.
ನಗರ ಡಿಸಿಪಿ ವಿಷ್ಣುವರ್ಧನ್ ಅವರು ಈ ಕುರಿತು ಮಾತನಾಡಿ, ಎನ್‍ಆರ್, ಕೆಆರ್, ಚಾಮರಾಜ ಕ್ಷೇತ್ರಗಳಲ್ಲಿ ಇವಿಎಂ ಹ್ಯಾಕ್ ಆಗಿದೆ ಎಂಬುದು ಸರಿಯಲ್ಲ. ಯಾವುದೇ ಮತಯಂತ್ರಗಳೂ ಹ್ಯಾಕ್ ಆಗಿಲ್ಲ. ಈ ಕುರಿತು ದೂರು ದಾಖಲಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ, ವಶಕ್ಕೂ ಪಡೆದಿಲ್ಲ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ