
ಬೆಂಗಳೂರು,ಮೇ 17
ರಾಮಕೃಷ್ಣ ಹೆಗಡೆ ನಂತರ ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಕೀರ್ತಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
ಯಡಿಯೂರಪ್ಪ ರೈತ ಹೋರಾಟಗಾರರಾಗಿ ಪಾದಯಾತ್ರೆಗಳ ಮೂಲಕವೇ ಪುರಸಭೆ ಸದಸ್ಯ ಸ್ಥಾನದಿಂದ ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗೆ ಬೆಳೆದು ಬಂದವರು. ನಾಲ್ಕು ದಶಕದ ರಾಜಕೀಯ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡಿರುವ ಅವರು ಈಗಲೂ ಸಂಖ್ಯಾಬಲದ ಕೊರತೆಯಿಂದ ಬಹುಮತ ಸಾಬೀತುಪಡಿಸುವ ಸವಾಲಿನಲ್ಲಿಯೇ ಸಿಎಂ ಸ್ಥಾನ ಅಲಂಕರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ ಮತ್ತು ಪುಟ್ಟತಾಯಮ್ಮ ದಂಪತಿಗೆ 1943 ಫೆಬ್ರವರಿ 27ರಂದು ಯಡಿಯೂರಪ್ಪ ಜನಿಸಿದರು. 1965ರಲ್ಲಿ ಸಮಾಜ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಯಡಿಯೂರಪ್ಪ ಆಯ್ಕೆಯಾಗಿದ್ದರು. ಆದರೆ, ಈ ಕೆಲಸ ಬಿಟ್ಟು ಶಿಕಾರಿಪುರದ ವೀರಭದ್ರ ಶಾಸ್ತ್ರಿ ರೈಸ್ ಮಿಲ್‌ನಲ್ಲಿ ಕ್ಲರ್ಕ್ ಆಗಿ 1967ರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದೇ ಮಿಲ್ ಮಾಲೀಕರ ಮಗಳಾದ ಮೈತ್ರಾದೇವಿಯನ್ನು ವಿವಾಹವಾಗಿ ಅದೇ ಊರಿನಲ್ಲಿ ನೆಲೆಯೂರಿದರು.
ಕಾಲೇಜು ದಿನಗಳಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟಿದ್ದ ಯಡಿಯೂರಪ್ಪ ಅವರನ್ನು 1970ರಲ್ಲಿ ಸಂಘದ ಕಾರ್ಯವಾಹಕರನ್ನಾಗಿ ನೇಮಿಸಲಾಯಿತು. ಅಂದಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ ಇವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ.
ಶಿಕಾರಿಪುರದ ಪುರಸಭೆಗೆ ಆಯ್ಕೆಯಾಗುವ ಮೊಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದರು. ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ಸೆರೆಮನೆವಾಸವನ್ನು ಅನುಭವಿಸಿದ್ದಾರೆ. ಬಳಿಕ 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಲಿಂಗಪ್ಪ ವಿರುದ್ಧ ಸೋತಿದ್ದು ಹೊರತು ಪಡಿಸಿ ನಡೆದ ಮತ್ತೆಲ್ಲ ಚುನಾವಣೆಗಳಲ್ಲಿಯೂ ಯಡಿಯೂರಪ್ಪ ಗೆಲುವಿನ ಹಾದಿಯನ್ನು ತುಳಿದಿದ್ದಾರೆ.
1999ರ ಚುನಾವಣೆಯಲ್ಲಿ ಸೋತರೂ, ವಿಧಾನ ಪರಿಷತ್ ಸದಸ್ಯರಾಗಿ ಇವರು ಆಯ್ಕೆಯಾಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷದ ನಾಯಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. 20 ತಿಂಗಳ ಅಧಿಕಾರವನ್ನು ಅನುಭವಿಸಿದ ಕುಮಾರಸ್ವಾಮಿ, ಒಪ್ಪಂದದಂತೆ ಬಿಜೆಪಿಯನ್ನು ಬೆಂಬಲಿಸಲು ನಿರಾಕರಿಸಿದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಸದನದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು.
2008ರಲ್ಲಿ ಚುನಾವಣೆ ನಡೆಯಿತು. ಅಂದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿ ಚುನಾವಣೆ ಎದರಿಸಿದ ಯಡಿಯೂರಪ್ಪಗೆ ಶಿಕಾರಿಪುರದಲ್ಲಿ ಮಾಜಿ ಸಿಎಂ ಸೋಲಿಲ್ಲದ ಸರದಾರ ಬಂಗಾರಪ್ಪ ಸವಾಲೊಡ್ಡಿ ಪರಾಭವಗೊಂಡರು.
ಅಂದು ಸರಳ ಬಹುಮತ ಪಡೆದ ಬಿಜೆಪಿ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆದರೆ, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ನೀಡಿದ ತನಿಖಾ ವರದಿಯಲ್ಲಿ ಯಡಿಯೂರಪ್ಪ ಅವರ ಹೆಸರಿತ್ತು. ಈ ಕಾರಣದಿಂದ 2011ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮ ನೀಡಿದ ಯಡಿಯೂರಪ್ಪ, ಸೆರೆವಾಸವನ್ನೂ ಅನುಭವಿಸಿದ್ದರು.
ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಯಡಿಯೂರಪ್ಪ ಕರ್ನಾಟಕ ಜನತಾ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿ, 2013ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ, ಕೆಲವೇ ತಿಂಗಳಲ್ಲಿ ಬಿಜೆಪಿಗೆ ಮರಳಿದ್ದರು.
2018ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದ ಬಿಜೆಪಿ, ಅವರ ನೇತೃತ್ವದಲ್ಲಿಯೇ ಚುನಾವಣಾ ಪ್ರಚಾರ ನಡೆಸಿತ್ತು. ಅಂತೆಯೇ ಚುನಾವಣೆಯಲ್ಲಿ 104 ಸ್ಥಾನಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಆಗಿ ಅವರು ಪ್ರಮಾಣವಚನ ಸ್ವೀಕರಿಸಿದರು.