ನವದೆಹಲಿ:ಮೇ-17: ಬಿಜೆಪಿ ಸರ್ಕಾರದ ರಚನೆಗೆ ಅವಕಾಶ ನೀಡಿರುವ ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಈ ಕ್ರಮ ಸಾಂವಿಧಾನಿಕ ಅಧಿಕಾರದ ದುರುಪಯೋಗ ಎಂದು ಅವರು ಆರೋಪಿಸಿದ್ದಾರೆ.
ನಾಳೆ ತಮ್ಮ ವಾದವನ್ನು ವಿಭಾಗೀಯ ಪೀಠದ ಮುಂದೆ ಮಂಡಿಸುವಂತೆ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಪೀಠ, ರಾಮ್ ಜೇಠ್ಮಾಲಾನಿಗೆ ತಿಳಿಸಿದೆ.
ರಾಮ್ ಜೇಠ್ಮಾಲಾನಿ ತುರ್ತು ಅರ್ಜಿ ವಿಚಾರಣೆಗೆ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಒಪ್ಪಿಗೆ ಸೂಚಿಸಿದ್ದು, ನಾಳೆ ಬೆಳಿಗ್ಗೆ ನ್ಯಾಯಾಧೀಶ ಎ. ಕೆ. ಸಿಕ್ರಿ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ವಿಶೇಷ ನ್ಯಾಯಪೀಠದ ಮುಂಭಾಗ ವಾದ ಮಂಡಿಸುವಂತೆ ರಾಮ್ ಜೇಠ್ಮಲಾನಿ ಅವರಿಗೆ ಹೇಳಿದೆ.
ರಾಜ್ಯಪಾಲರ ಆದೇಶ ಸಾಂವಿಧಾನಿಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಂತಾಗಿದೆ. ಸಾಂವಿಧಾನಿಕ ಕಚೇರಿಯನ್ನು ತಮ್ಮ ಕೈಯಲ್ಲಿಟ್ಟುಕೊಂಡಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಜೇಠ್ಮಲಾನಿ ಆರೋಪಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷದ ಪರವಾಗಿ ತಾನೂ ಅರ್ಜಿ ಸಲ್ಲಿಸಿಲ್ಲ, ರಾಜ್ಯಪಾಲರ ನಿರ್ಧಾರ ಸಂವಿಧಾನ ಬಾಹಿರವಾಗಿರುವುದರಿಂದ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯಪಾಲರ ನಿರ್ಧಾರದ ವಿರುದ್ಧ ಬುಧವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸುಪ್ರೀಂಕೋರ್ಟ್ಗೆ ಬಾಗಿಲು ತಟ್ಟಿದ್ದವು. ಮಧ್ಯರಾತ್ರಿ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂನ ತ್ರಿಸದಸ್ಯ ಪೀಠ, ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ತಡೆ ನೀಡಲು ನಿರಾಕರಿಸಿ, ವಿಚಾರಣೆಯನ್ನು ನಾಳೆ ಮುಂದೂಡಿತ್ತು.
ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಅರ್ಜಿ ವಿಚಾರಣೆ ನಡೆಯಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಮಾಣವಚನ ತಡೆಗೆ ನಿರಾಕರಿಸಿತು. ಯಡಿಯೂರಪ್ಪ ಬೆಂಬಲಿಗ ಶಾಸಕರ ಸಂಖ್ಯೆ ಮತ್ತು ಹೆಸರನ್ನು ಸಲ್ಲಿಸುವಂತೆ ಸುಪ್ರೀಂ ತಿಳಿಸಿತ್ತು.
ನಾಳೆ ಬೆಳಿಗ್ಗೆ 10-30ಕ್ಕೆ ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿದೆ.