ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಣ್ಣೀರು

ಬೆಂಗಳೂರು, ಮೇ 16-ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆಯನ್ನು ಹೊತ್ತ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಇಂದು ಬೆಳಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಚುನಾವಣೆ ಫಲಿತಾಂಶದ ವಿಶ್ಲೇಷಣೆ ವೇಳೆ ಸಿದ್ದರಾಮಯ್ಯ ಅವರು ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಟ್ಟಿದ್ದು, ನಾವು ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಸಾಕಷ್ಟು ಕೆಲಸ ಮಾಡಿದ್ದೇವೆ. ಹಿಂದೆ ಎಲ್ಲಾ ಸರ್ಕಾರಗಳಿಗಿಂತಲೂ ಹೆಚ್ಚಿನ ಯೋಜನೆಗಳನ್ನು ಕೊಟ್ಟಿದ್ದೆವು. ಬಡವರಿಗೆ, ಅಹಿಂದ ವರ್ಗಕ್ಕೆ ಸರ್ಕಾರ ಸಾಕಷ್ಟು ನೆರವು ನೀಡಿತ್ತು. ಆದರೆ ಅದ್ಯಾವುದೂ ಚುನಾವಣೆಯಲ್ಲಿ ಪರಿಗಣಿಸಲಾಗಿಲ್ಲ. ನಮ್ಮ ಪಕ್ಷದಲ್ಲೇ ಬಹಳಷ್ಟು ಮಂದಿ ಕಾಂಗ್ರೆಸ್ ಸೋಲಿಗೆ ತೆರೆಮರೆಯಲ್ಲಿ ಆಟ ಆಡಿದರು ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

ಮಾತಿನ ನಡುವೆ ಮೈಸೂರಿನ ವಿಧಾನಪರಿಷತ್ ಸದಸ್ಯ ಧರ್ಮಸೇನಾ ಅವರು ಭಾವೋದ್ವೇಗಕ್ಕೊಳಗಾಗಿ ಕಣ್ಣೀರು ಹಾಕಿದ್ದು, ಅದರ ಬೆನ್ನಲ್ಲೇ ಸಿದ್ದರಾಮಯ್ಯ ಕೂಡ ಕಣ್ಣೀರು ಹರಿಸಿದ್ದಾರೆ.

ಬಿಜೆಪಿಯವರು ಬರೀ ಸುಳ್ಳನ್ನೇ ಹೇಳುತ್ತಾ ಬಂದರು. ಅವರು ಹಿಂದಿನ ಸರ್ಕಾರದಲ್ಲಿ ಕಣ್ಣಿಗೆ ಕಾಣುವಂತಹ ಭ್ರಷ್ಟಾಚಾರಗಳು ನಡೆಸಿದರು. ಮೂರು ಜನ ಮುಖ್ಯಮಂತ್ರಿಗಳು ಬದಲಾವಣೆಯಾಗಿದ್ದರು. ರಾಜ್ಯದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗಿತ್ತು. ಪ್ರಧಾನ ನರೇಂದ್ರ ಮೋದಿ ಮಾಡಿದ ಭಾಷಣಗಳಲ್ಲಿ ಬಹಳಷ್ಟು ಸುಳ್ಳಿನ ಅಂಶಗಳೇ ಇದ್ದವು. ಇಷ್ಟೆಲ್ಲ ಸತ್ಯ ಜನರಿಗೆ ಗೊತ್ತಿದ್ದರೂ ಮತ್ತೆ ಬಿಜೆಪಿಗೆ 104 ಸ್ಥಾನ ನೀಡಿರುವುದು ಆಶ್ಚರ್ಯ ತಂದಿದೆ. ಇದು ರಾಜಕಾರಣ ಯಶಸ್ಸು ಆಗುತ್ತದೆ ಎಂಬ ಆತಂಕ ಮೂಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕಣ್ಣೀರು ಹಾಕಿದಾಗ ಅವರೊಂದಿಗೆ ಇತರ ಶಾಸಕರೂ ಕೂಡ ದುಃಖ ವ್ಯಕ್ತಪಡಿಸಿದರು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಯಶಸ್ವಿಯಾಗಲಿ, ನಾನು ಇಂದಿನ ಸರ್ಕಾರಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡಲು ಬದ್ಧನಾಗಿದ್ದೇನೆ. ಮೈತ್ರಿ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ