ಬೆಂಬಲಪತ್ರ ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದ ಪರಮೇಶ್ವರ್

ಬೆಂಗಳೂರು, ಮೇ 16-ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬೆಂಬಲ ವ್ಯಕ್ತಪಡಿಸಿದ ಪತ್ರಗಳಿಗೆ ಕಾಂಗ್ರೆಸ್ ಶಾಸಕರು ಸಹಿ ಹಾಕಿ ಕೊಟ್ಟಿದ್ದು, ಅದನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‍ಅವರು, ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 70ಕ್ಕೂ ಹೆಚ್ಚು ಮಂದಿ ಶಾಸಕರು ಜೆಡಿಎಸ್‍ಗೆ ಬೆಂಬಲ ವ್ಯಕ್ತಪಡಿಸಲು ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬೆಂಬಲ ವ್ಯಕ್ತಪಡಿಸುವ ಪತ್ರಗಳಿಗೆ ಸಹಿ ಹಾಕಿದರು.

ಸಹಿ ಇರುವ ಪತ್ರಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಕಾರ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ನಗರದ ಖಾಸಗಿ ಹೊಟೇಲ್‍ನಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಹಸ್ತಾಂತರಿಸಿದ್ದಾರೆ.

ರಾಜ್ಯಪಾಲರ ಕಚೇರಿಗೆ ತಾಂತ್ರಿಕವಾಗಿ ಅಗತ್ಯವಿರುವ ಎಲ್ಲಾ ಕಾಗದ ಪತ್ರಗಳನ್ನು ಹಂತ ಹಂತವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒದಗಿಸುತ್ತಿದೆ. ಒಂದು ವೇಳೆ ರಾಜ್ಯಪಾಲರು ಮೈತ್ರಿಕೂಟಕ್ಕೆ ಸರ್ಕಾರ ರಚಿಸುವ ಅವಕಾಶ ನಿರಾಕರಿಸಿದರೆ ಕಾನೂನು ಹೋರಾಟ ನಡೆಸಲು ಅಗತ್ಯವಾಗುವಂತೆ ಮೈತ್ರಿಕೂಟ ವ್ಯವಸ್ಥಿತ ದಾಖಲೆ ಪತ್ರಗಳನ್ನು ನಿರ್ಮಾಣ ಮಾಡುತ್ತಿದೆ. ಜೊತೆಗೆ ರಾಜಕೀಯ ಹೋರಾಟಕ್ಕೂ ತಯಾರಿ ನಡೆದಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಗೂ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು, ರಾಜ್ಯಪಾಲರು ಸಂಖ್ಯಾಬಲ ಆಧರಿಸಿ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಇದೆ. ಒಂದು ವೇಳೆ ಬಿಜೆಪಿಗೆ ಅವಕಾಶ ನೀಡಿದರೆ ನಾವು ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ದರಾಗಿದ್ದೇವೆ. ರಾಜಭವನದ ಮುಂದೆ ಪ್ರತಿಭಟನೆ ನಡೆಸುವುದು, ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು ಮತ್ತು ರಾಜಕೀಯವಾಗಿ ಹೋರಾಟ ಮಾಡುವುದು ನಮ್ಮ ಆಯ್ಕೆಗಳಾಗಿದ್ದು, ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ. ಎಂದು ತಿಳಿಸಿದರು.

ಬಿಜೆಪಿ ದೊಡ್ಡ ಪಕ್ಷವಾಗಿದೆ ಎಂಬ ಕಾರಣಕ್ಕಾಗಿ ಸರ್ಕಾರ ರಚಿಸಲು ಅವರಿಗೆ ಅವಕಾಶ ನೀಡುವಂತಿಲ್ಲ. ಏಕೆಂದರೆ ಈ ಹಿಂದೆ ಮೇಘಾಲಯ, ಮಣಿಪುರ, ಗೋವಾದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅಲ್ಲಿನ ರಾಜ್ಯಪಾಲರು ಹೆಚ್ಚು ಸಂಖ್ಯಾಬಲ ಪ್ರದರ್ಶಿಸಿದ ಮೈತ್ರಿಕೂಟಗಳಿಗೆ ಸರ್ಕಾರ ರಚಿಸುವ ಅಧಿಕಾರ ನೀಡಿದ್ದಾರೆ. ಅದೇ ರೀತಿ ಕರ್ನಾಟಕದಲ್ಲೂ ಹೆಚ್ಚು ಸಂಖ್ಯಾಬಲ ಹೊಂದಿರುವ ಮೈತ್ರಿಕೂಟಕ್ಕೆ ಅವಕಾಶ ನೀಡಲೇಬೇಕೆಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ