ಬೆಂಗಳೂರು,ಮೇ16- ಅತಂತ್ರ ಸ್ಥಿತಿಯಲ್ಲೂ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿರುವ ಮೂರು ಪಕ್ಷಗಳಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಇಂದು ನಡೆದಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳು ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಪೂರ್ಣಗೊಳಿಸಿದರೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡದೆ ರಾಜ್ಯಪಾಲರ ನಿರ್ಣಯವನ್ನು ಕಾದು ನೋಡುವ ತಂತ್ರಗಾರಿಕೆ ಅನುಸರಿಸಿದೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್, ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪ್ರಕಾಶ್ ಜಾವ್ಡೇಕರ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಶಾಸಕರು ಯಡಿಯೂರಪ್ಪನವರನ್ನೇ ಶಾಸಕಾಂಗ ಸಭೆಯ ನಾಯಕನ್ನಾಗಿ ಒಕ್ಕೊರಲಿನಿಂದ ಆಯ್ಕೆ ಮಾಡಿದರು.
ಸಭೆಯ ಬಳಿಕ ಯಡಿಯೂರಪ್ಪ , ಅನಂತಕುಮಾರ್, ಜಾವ್ಡೇಕರ್, ಲಿಂಬಾವಳಿ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ಇನ್ನೊಂದೆಡೆ ಖಾಸಗಿ ಹೊಟೇಲ್ನಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶಾಸಕಾಂಗ ಪಕ್ಷದ ಸಭೆ ನಂತರ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಜಿ.ಟಿ.ದೇವೇಗೌಡ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲು ನಾವು ಸೂಚಿಸಿದೆವು. ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಅದನ್ನು ಅನುಮೋದಿಸಿದರು. ನಂತರ ಸರ್ವಾನುಮತದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ತಿಳಿಸಿದರು.
ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಸಂಸದ ಪುಟ್ಟರಾಜು, ಶಾಸಕರಾದ ರೇವಣ್ಣ, ಶಿವಲಿಂಗೇಗೌಡ, ಬಾಲಕೃಷ್ಣ, ಡಿ.ಸಿ.ತಮ್ಮಣ್ಣ, ಎಚ್.ಕೆ.ಕುಮಾರಸ್ವಾಮಿ, ಡಾ.ಶ್ರೀನಿವಾಸಮೂರ್ತಿ ಸೇರಿದಂತೆ ಚುನಾಯಿತ ಅಭ್ಯರ್ಥಿಗಳು ಉಪಸ್ಥಿತರಿದ್ದರು.