ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿದರೆ ನಾವೇನೂ ಸನ್ಯಾಸಿಗಳಲ್ಲ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್‍ಸ್ವಾಮಿ ಟಾಂಗ್

ಬೆಂಗಳೂರು,ಮೇ16- ಸರಳ, ಬಹುಮತದ ಸಂಖ್ಯಾ ಬಲದ ಕೊರತೆ ಇದ್ದರೂ ಅಧಿಕಾರಕ್ಕಾಗಿ ಆಪರೇಷನ್ ಕಮಲಕ್ಕೆ ಬಿಜೆಪಿ ಕೈ ಹಾಕಿದರೆ ನಾವೇನೂ ಸನ್ಯಾಸಿಗಳಲ್ಲ. ನಾವು ಕೂಡ ಬಿಜೆಪಿ ಶಾಸಕರ ಆಪರೇಷನ್‍ಗೆ ಮುಂದಾಗಬೇಕಾಗುತ್ತದೆ ಎಂದು ಹೇಳುವ ಮೂಲಕ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್‍ಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಖಾಸಗಿ ಹೋಟೆಲ್‍ನಲ್ಲಿಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಒಡೆಯಲು ಮುಂದಾದರೆ ಅದರ ಎರಡು ಪಟ್ಟು ಬಿಜೆಪಿ ಶಾಸಕರನ್ನು ನಮ್ಮ ಪಕ್ಷಕ್ಕೆ ಕರೆತರಲು ಪ್ರಯತ್ನ ಮಾಡಬೇಕಾಗುತ್ತದೆ ಎಂದರು.

ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡಿದ್ದೇ ಆದರೆ ಬಿಜೆಪಿಯಿಂದ 10-15 ಮಂದಿ ಶಾಸಕರು ಹೊರಬರಲು ಸಿದ್ಧರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯಾ ಬಲವೇ ಮುಖ್ಯವಾಗಿರುವುದರಿ ಂದ ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರು ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ನಿನ್ನೆ ರಾತ್ರಿ ಜೆಡಿಎಸ್‍ನ ಕೆಲ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದರೂಇದಕ್ಕೆ ನಮ್ಮ ಶಾಸಕರು ಒಪ್ಪಿಲ್ಲ ಎಂದು ಹೇಳಿದರು.

ಸಂಖ್ಯಾ ಬಲ ಇಲ್ಲದಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಆಸೆ ಪಡುವುದಿಲ್ಲ. ಕಾಂಗ್ರೆಸ್ ಪಕ್ಷವೇ ಸ್ವ ಇಚ್ಚೆಯಿಂದ ಷರತ್ತು ರಹಿತ ಬೆಂಬಲವನ್ನು ನೀಡಲು ಮುಂದೆ ಬಂದ ನಂತರವೇ ನಾವು ಸರ್ಕಾರ ರಚನೆಗೆ ಮುಂದಾಗಿರುವುದು ಎಂದರು.

ಈಗಿನ ಪರಿಸ್ಥಿತಿಯಲ್ಲಿ ರೆಸಾರ್ಟ್‍ಗೆ ಹೋಗುವ ಅಗತ್ಯವಿಲ್ಲ. ಆದರೆ ಕುದುರೆ ವ್ಯಾಪಾರ ಬಿಜೆಪಿ ಆರಂಭಿಸಿರುವುದರಿಂದ ಪಕ್ಷ ಹಾಗೂ ಶಾಸಕರ ಹಿತವನ್ನು ಕಾಪಾಡಬೇಕಾಗಿದೆ. ನಮ್ಮ ಪಕ್ಷದ ಶಾಸಕರನ್ನು ಖರೀದಿಸುವ ಪ್ರಯತ್ನಿಸಿದರೆ ನಾವೂ ಪ್ರತಿತಂತ್ರ ಹೆಣೆಯುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ನನಗೆ ಎರಡೂ ಪಕ್ಷಗಳಿಂದಲೂ ಮೈತ್ರಿ ಸರ್ಕಾರ ರಚನೆಗೆ ಆಹ್ವಾನವಿದೆ. ಈ ಹಿಂದೆ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದರಿಂದ ದೇವೇಗೌಡರ ನಿಲುವಿನ ಬಗ್ಗೆ ವ್ಯಾಪಕ ಟೀಕೆಯಾಗಿತ್ತು. ಅವರ ರಾಜಕೀಯ ಜೀವನಕ್ಕೆ ಧಕ್ಕೆಯಾಗಬಾರದೆಂಬ ಉದ್ದೇಶದಿಂದ ಈಗ ಕಾಂಗ್ರೆಸ್ ಬೆಂಬಲಿತ ಸರ್ಕಾರ ರಚನೆಗೆ ಮುಂದಾಗಿರುವುದಾಗಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ