ಬೆಂಗಳೂರು, ಮೇ 16-ಅತಂತ್ರ ವಿಧಾನಸಭೆ ರಚನೆಯಾಗಿರುವ ಕರ್ನಾಟಕದಲ್ಲಿ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಿ.ಆರ್.ವಾಲಾ ಅವರು ಆಹ್ವಾನ ನೀಡಲಿದ್ದಾರೆ.
ನಿನ್ನೆ ಪ್ರಕಟಗೊಂಡು ಒಟ್ಟು 222 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 104 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈಗಾಗಲೇ ಪಕ್ಷೇತರ ಶಾಸಕ ಆರ್.ಶಂಕರ್ ಕೂಡ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿದ್ದರು. ಈಗಾಗಲೇ ಸಂವಿಧಾನ ತಜ್ಞರ ಜೊತೆ ಚರ್ಚೆ ನಡೆಸಿರುವ ರಾಜ್ಯಪಾಲರು ಬಿಜೆಪಿಗೆ ಒಂದೆರಡು ದಿನದಲ್ಲಿ ಸರ್ಕಾರ ರಚಿಸಲು ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರ ರಚನೆಯಾದ ಬಳಿಕ ಒಂದು ವಾರ ಇಲ್ಲವೇ 10 ದಿನದೊಳಗೆ ವಿಧಾನಸಭೆಯಲ್ಲಿ ತಮಗಿರುವ ಬಹುಮತವನ್ನು ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಲಿದ್ದಾರೆ.
ಯಾವುದೇ ಒಂದು ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದಾಗ ದೊಡ್ಡ ಪಕ್ಷವಾಗಿ ಹೊರಹೊಮ್ಮಿದವರಿಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು. ಅದರಂತೆ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿ ಸದನದಲ್ಲೇ ಬಹುಮತ ಸಾಬೀತಿಗೆ ಸೂಚಿಸುವರು.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ತಮಗಿರುವ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲದ ಪತ್ರವನ್ನು ನೀಡಿದ್ದಾರೆ. ಈ ಹಂತದಲ್ಲಿ ರಾಜ್ಯಪಾಲರು ಪ್ರತಿಯೊಂದನ್ನು ಕೂಲಂಕುಷವಾಗಿಯೇ ಪರಿಶೀಲಿಸಿಯೇ ಕ್ರಮ ಕೈಗೊಳ್ಳಲಿದ್ದಾರೆ.
ಸರ್ಕಾರ ರಚನೆಗೆ ಎರಡೂ ಕಡೆಯಿಂದ ಒತ್ತಡ ಬರುತ್ತಿರುವುದರಿಂದ ಯಾರಿಗೆ ನೀಡಬೇಕೆಂಬ ಜಿಜ್ಞಾಸೆ ರಾಜ್ಯಪಾಲರಿಗೂ ಎದುರಾಗಿದೆ. ರಾತ್ರಿಯಿಂದಲೇ ದಿನಪೂರ್ತಿ ಕಾನೂನು ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.