ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಆಪರೇಷನ್ ಹಸ್ತಕ್ಕೆ ಕೈ ಹಾಕಿದೆ

ಬೆಂಗಳೂರು, ಮೇ 16-ಕಾಂಗ್ರೆಸ್-ಜೆಡಿಎಸ್ ರಚನೆಗೆ ಅವಕಾಶ ಸಿಗದಂತೆ ಮಾಡಲು ಬಿಜೆಪಿ ಆಪರೇಷನ್ ಕಮಲ ಮಾಡಲು ಮುಂದಾಗಿದ್ದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಆಪರೇಷನ್ ಹಸ್ತಕ್ಕೆ ಕೈ ಹಾಕಿದೆ.

ಬಿಜೆಪಿಯಲ್ಲಿ ಪ್ರಾತಿನಿಧ್ಯ ಸಿಗದೆ ಮೂಲೆಗುಂಪಾಗಿದ್ದ ನಾಯಕರುಗಳನ್ನು ಹುಡುಕಿ ಕಾಂಗ್ರೆಸ್ ಸಂಪರ್ಕಿಸಲು ಆರಂಭಿಸಿದೆ. ಈವರೆಗೂ ರಾಜಕೀಯದಲ್ಲಿ ಕಾಂಗ್ರೆಸ್ ರಕ್ಷಣಾತ್ಮಕ ತಂತ್ರಗಳನ್ನು ಮಾತ್ರ ಅನುಸರಿಸುತ್ತಿತ್ತು. ತನ್ನ ಶಾಸಕರನ್ನು ರಕ್ಷಿಸಿಕೊಳ್ಳುವುದಕ್ಕಷ್ಟೇ ಕಾಂಗ್ರೆಸ್ ಪ್ರಯತ್ನಿಸುತ್ತಿತ್ತು. ಈಗ ಪ್ರತಿದಾಳಿ ತಂತ್ರಗಾರಿಕೆಯನ್ನು ಕಾಂಗ್ರೆಸ್ ಆರಂಭಿಸಿದೆ.

ಈಗಾಗಲೇ ಬಿಜೆಪಿಯ ಐದಾರು ಮಂದಿ ಶಾಸಕರನ್ನು ಕಾಂಗ್ರೆಸ್ ಸಚಿವರು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.ಕಾಂಗ್ರೆಸ್‍ನಲ್ಲಿರುವ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿ ಹೊಳಿ ಅವರುಗಳಿಗೆ ಆಪರೇಷನ್ ಹಸ್ತದ ಜವಾಬ್ದಾರಿ ನೀಡಿದ್ದು, ಬಿಜೆಪಿ ಪಕ್ಷವು ಕಾಂಗ್ರೆಸ್ ಅಥವಾ ಜೆಡಿಎಸ್‍ನ ಒಬ್ಬ ಶಾಸಕರನ್ನು ಸೆಳೆದರೆ, ಕಾಂಗ್ರೆಸ್ ನಾಯಕರು ಬಿಜೆಪಿಯ ಐದಾರು ಮಂದಿ ಶಾಸಕರನ್ನು ವಿಶ್ವಾಸ ಮತ ಯಾಚನೆ ಕಲಾಪಕ್ಕೆ ಗೈರು ಹಾಜರಾಗುವಂತೆ ಮಾಡುವ ರಣತಂತ್ರ ರೂಪಿಸಿದ್ದಾರೆ.

ಹೀಗಾಗಿ ಕರ್ನಾಟಕ ರಾಜಕೀಯ ಮತ್ತೊಂದು ಬಾರಿ ಪ್ರಯೋಗಶಾಲೆಯಾಗಿ ಮಾರ್ಪಾಡಾಗುತ್ತಿದೆ. 2008ರಲ್ಲಿ ನಡೆದ ಆಪರೇಷನ್ ಕಮಲದಿಂದ ಕಾಂಗ್ರೆಸ್, ಜೆಡಿಎಸ್‍ನ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಪಾಳಯ ಸೇರಿದ್ದರು. ಈಗ ಅದೇ ತಂತ್ರಗಾರಿಕೆಯನ್ನು ಬಿಜೆಪಿ ಅನುಸರಿಸುತ್ತಿದೆ. ಒಂದು ವೇಳೆ ಬಿಜೆಪಿಯೇನಾದರೂ ಆಪರೇಷನ್ ಕಮಲಕ್ಕೆ ಕೈ ಇಟ್ಟರೆ, ಬಿಜೆಪಿ ಶಾಸಕರ ಸಂಖ್ಯಾಬಲವನ್ನೇ ಕಡಿಮೆ ಮಾಡಲು ಕಾಂಗ್ರೆಸ್ ತೊಡೆ ತಟ್ಟಿ ನಿಂತಿದೆ. ಹೀಗಾಗಿ ರಾಜ್ಯ ರಾಜಕೀಯ ಜಿದ್ದಾಜಿದ್ದಿಗೆ ತಿರುಗಿದೆ.

ರಾಜ್ಯಪಾಲರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜಕೀಯ ಬೆಳವಣಿಗೆಗಳು ಅವಲಂಬಿತವಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ