ಬೆಂಗಳೂರು, ಮೇ 16-ಆಪರೇಷನ್ ಕಮಲದ ಭೀತಿಯಿಂದ ಕಂಗಾಲಾಗಿರುವ ಕಾಂಗ್ರೆಸ್ ತನ್ನ ಪಕ್ಷದ ಶಾಸಕರನ್ನು ಖಾಸಗಿ ರೆಸಾರ್ಟ್ಗೆ ಸ್ಥಳಾಂತರಿಸಿದೆ.
ಇಂದು ಶಾಸಕಾಂಗ ಸಭೆ ನಂತರ ಎಲ್ಲಾ ಶಾಸಕರನ್ನು ಒಗ್ಗೂಡಿಸಿ ಬೆಂಗಳೂರಿನ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ಗೆ ಕರೆದೊಯ್ಯಲಾಗಿದೆ. 78 ಶಾಸಕರ ಪೈಕಿ ಸುಮಾರು 20 ಮಂದಿಗೆ ಬಿಜೆಪಿ ಗಾಳ ಹಾಕಿದ್ದು, ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಪ್ರಯಾಸದ ಕೆಲಸವಾಗಿದೆ.
ಬೆಂಗಳೂರಿನಲ್ಲೇ ಇದ್ದರೆ ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯಬಹುದು ಎಂಬ ಆತಂಕದಿಂದ ಕಾಂಗ್ರೆಸ್ ಕೂಡ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರನ್ನು ರಕ್ಷಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ.
ಖಾಸಗಿ ರೆಸಾರ್ಟ್ಗೆ ತೆರಳುವ ಪ್ರತಿಯೊಬ್ಬ ಶಾಸಕರಿಗೂ ಬಿಗಿ ಭದ್ರತೆ ಒದಗಿಸಲು ಹಾಗೂ ಬಿಜೆಪಿ ಸಂಪರ್ಕಕ್ಕೆ ಅವಕಾಶ ಸಿಗದಂತೆ ಭದ್ರಕೋಟೆ ನಿರ್ಮಿಸಲಾಗಿದೆ.
ಬಿಜೆಪಿ ಹಠಕ್ಕೆ ಬಿದ್ದು, ಸರ್ಕಾರ ರಚಿಸಲು ಮುಂದಾಗಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಬಿಟ್ಟು ಕೊಡದಿರಲು ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗುತ್ತಿದೆ.
ಇಂದು ಬೆಳಗ್ಗೆ 8.30ಕ್ಕೆ ಆರಂಭವಾದ ಸಿಎಲ್ಪಿ ಸಭೆಗೆ 12 ಗಂಟೆಯಾದರೂ ಕೇವಲ 55 ಮಂದಿ ಶಾಸಕರು ಮಾತ್ರ ಹಾಜರಾಗಿದ್ದರು. ಉಳಿದವರ ಗೈರು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿತ್ತು. ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಅವರುಗಳು ಖುದ್ದಾಗಿ ಎಲ್ಲಾ ಗೈರು ಹಾಜರಾದ ಶಾಸಕರಿಗೆ ಕರೆ ಮಾಡಿ ಬಿಜೆಪಿ ಆಮಿಷಕ್ಕೆ ಒಳಗಾಗದಂತೆ ಮಾತುಕತೆ ನಡೆಸಿದ್ದರು.
ಪ್ರತಿ ಅರ್ಧಗಂಟೆಗೊಮ್ಮೆ ಶಾಸಕರನ್ನು ಸಂಪರ್ಕಿಸುವ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಕೆಲವರು ದೂರದ ಊರುಗಳಿಂದ ವಿಮಾನದಲ್ಲಿ ಆಗಮಿಸುತ್ತಿದ್ದರಿಂದ ಮೊಬೈಲ್ಗಳು ಸ್ವಿಚ್ಆಫ್ ಆಗಿತ್ತು. ಇದೂ ಸಹ ಒಂದು ಹಂತದಲ್ಲಿ ಗಲಿಬಿಲಿಗೆ ಕಾರಣವಾಯಿತು.
ಶಾಸಕರ ಸ್ವಂತ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಸಿ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರನ್ನು ಶಾಸಕರ ಜೊತೆಗೆ ಕಳುಹಿಸಿ ಅವರ ಮೊಬೈಲ್ ಮೂಲಕವೇ ಶಾಸಕರನ್ನು ಸಂಪರ್ಕಿಸುವ ಮಾರ್ಗೋಪಾಯ ಮಾಡಿ ಅವರನ್ನು ನಿರಂತರ ಸಂಪರ್ಕದಲ್ಲಿಟ್ಟುಕೊಂಡಿರುವ ಕಾಂಗ್ರೆಸ್, ಆಪರೇಷನ್ ಕಮಲಕ್ಕೆ ಆಸ್ಪದ ನೀಡದಿರಲು ಎಲ್ಲಾ ಪ್ರಯತ್ನ ನಡೆಸುತ್ತಿದೆ.