ಮತ್ತೆ ಆಪರೇಷನ್ ಕಮಲ ?

ಬೆಂಗಳೂರು, ಮೇ 16-ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ಬೆನ್ನಲ್ಲೇ ಅತಿ ಹೆಚ್ಚು ಸ್ಥಾನ ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದು, ಕಾಂಗ್ರೆಸ್‍ನ 15ಕ್ಕೂ ಹೆಚ್ಚು ಮಂದಿ ಶಾಸಕರನ್ನು ನಿರಂತರವಾಗಿ ಸಂಪರ್ಕಿಸುತ್ತಿದೆ.

ಬಿಜೆಪಿಯ ಆಪರೇಷನ್ ದಾಳಿಯಿಂದ ತಪ್ಪಿಸಿಕೊಂಡು ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತೆ ರೆಸಾರ್ಟ್ ರಾಜಕೀಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿದೆ. 78 ಸ್ಥಾನ ಗಳಿಸಿರುವ ಕಾಂಗ್ರೆಸ್, 38 ಸ್ಥಾನ ಗಳಿಸಿರುವ ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿವೆ. ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ತಮ್ಮ ಸಂಖ್ಯಾಬಲವನ್ನು ತಿಳಿಸಿದ್ದು, ಸರ್ಕಾರ ರಚನೆಗೆ ಮೊದಲಿಗೆ ಅವಕಾಶ ನೀಡುವಂತೆ ಉಭಯ ಪಕ್ಷಗಳು ಮನವಿ ಮಾಡಿವೆ. ಈ ನಡುವೆ ಬಿಜೆಪಿ ನಾಯಕರೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ತಾವು ಹೆಚ್ಚು ಸ್ಥಾನ ಗಳಿಸಿದ್ದು, ಸಂಖ್ಯಾಬಲ ಸಾಬೀತುಪಡಿಸಲು ಒಂದು ವಾರ ಕಾಲಾವಕಾಶ ನೀಡುವಂತೆ ರಾಜ್ಯಪಾಲರಿಗೆ ಕೋರಿಕೆ ಸಲ್ಲಿಸಿದೆ.

ಕುತೂಹಲಕಾರಿ ಬೆಳವಣಿಗೆಯಲ್ಲಿ ಕಾಂಗ್ರೆಸ್‍ನ ಸುಮಾರು 15ಕ್ಕೂ ಹೆಚ್ಚು ಮಂದಿ ಶಾಸಕರನ್ನು ಬಿಜೆಪಿ ನಾಯಕರು ಪದೇ ಪದೇ ಸಂಪರ್ಕಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಭಾಗವಹಿಸುವ ಮುನ್ನ ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಅಮರೇಗೌಡ ಬೈಯ್ಯಾಪುರ ಅವರು ಬಿಜೆಪಿಯವರು ಕರೆ ಮಾಡಿರುವುದು ಖಚಿತಪಡಿಸಿದರು. ಯಾರು ಕರೆ ಮಾಡಿದ್ದಾರೆ ಎಂದು ಬಹಿರಂಗಪಡಿಸುವುದಿಲ್ಲ. ಆದರೆ ಬಿಜೆಪಿ ಪಾಳಯದಿಂದ ತಮಗೆ ದೂರವಾಣಿ ಕರೆ ಬಂದಿರುವುದು ನಿಜ. ಸರ್ಕಾರ ರಚನೆಗೆ ಬೆಂಬಲ ನೀಡಿ, ಸಹಕರಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ತಾವು ಅದಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಗುಲ್ಬರ್ಗಾ ಜಿಲ್ಲೆ ಅಫ್ಜಲ್‍ಪುರ ಕ್ಷೇತ್ರದ ಎಂ.ವೈ.ಪಾಟೀಲ್ ಕೂಡ ತಮಗೆ ಬಿಜೆಪಿ ವಲಯದಿಂದ ಕರೆ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಆದರೆ ತಾವು ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿಯವರು ಚುನಾವಣೆಯ ನಿರ್ಣಾಯಕ ಘಟ್ಟದಲ್ಲಿ ನನಗೆ ಬಿಜೆಪಿ ನಾಯಕರು ವಂಚನೆ ಮಾಡಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನನ್ನನ್ನು ಕೈ ಹಿಡಿದರು. ಅಫ್ಜಲ್‍ಪುರ ಕ್ಷೇತ್ರದಲ್ಲಿ ಗೆಲ್ಲಲು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರು ಸಹಕಾರ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಏನೇ ಆಮಿಷವೊಡ್ಡಿದರೂ ತಾವು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ರಾಯಚೂರಿನ ಮಸ್ಕಿ ಕ್ಷೇತ್ರದ ಪ್ರತಾಪ್‍ಗೌಡ ಪಾಟೀಲ್ ಅವರೂ ಕೂಡ ತಮಗೆ ಬಿಜೆಪಿ ಪಾಳಯದಿಂದ ಕರೆ ಬಂದಿರುವುದನ್ನು ಖಚಿತಪಡಿಸಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿಯವರ ಆಮಿಷಗಳಿಗೆ ಬಲಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಆಪರೇಷನ್ ಚುರುಕುಗೊಳಿಸಿದ ಬಿಜೆಪಿ:
104 ಸ್ಥಾನ ಗಳಿಸಿ ಬಹುಮತಕ್ಕೆ 9 ಸ್ಥಾನಗಳ ಕೊರತೆಯಿಂದ ಬಳಲುತ್ತಿರುವ ಬಿಜೆಪಿ ನಾಯಕರು ಶತಾಯಗತಾಯ ಕರ್ನಾಟಕದಲ್ಲಿ ಸರ್ಕಾರ ರಚನೆ ಮಾಡಿ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಈ ಮುನ್ಸೂಚನೆಯನ್ನು ಅರಿತ ಕಾಂಗ್ರೆಸ್ ನಿನ್ನೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಆರಂಭದಲ್ಲಿ ಬೇಷರತ್ ಬೆಂಬಲ ಘೋಷಿಸುವ ಚಾಣಾಕ್ಷ ನಡೆ ಅನುಸರಿಸಿತ್ತು. ಅದರ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರು ತಡಮಾಡದೆ ರಾಜ್ಯಪಾಲರನ್ನು ಭೇಟಿ ಮಾಡಿ ಸಂಖ್ಯಾಬಲ ಇರುವುದನ್ನು ಮನವರಿಕೆ ಮಾಡಿಕೊಟ್ಟು ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಿದರು. ಈ ನಡೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ತಾಂತ್ರಿಕವಾಗಿ ಜೆಡಿಎಸ್, ಕಾಂಗ್ರೆಸ್ ಹೆಜ್ಜೆಗಳು ನಿಯಮಬದ್ಧವಾಗಿವೆ. ಹೀಗಾಗಿ ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡುವುದು ಅಥವಾ ರಾಜ್ಯಪಾಲರ ಕಚೇರಿಯ ಮೇಲೆ ಒತ್ತಡ ಹೇರುವುದು ಸಾಧ್ಯವಿಲ್ಲ ಎಂಬುದು ಮನವರಿಕೆಯಗುತ್ತಿದ್ದಂತೆ ಆಪರೇಷನ್ ಕಮಲಕ್ಕೆ ಮುಂದಾಗಿದೆ.

ಕೈ ಶಾಸಕರನ್ನು ಸಂಪರ್ಕಿಸಿದ ಬಿಜೆಪಿ:
ಬಿಜೆಪಿ ನಾಯಕರು ನಿನ್ನೆ ರಾತ್ರಿಯಿಂದಲೂ ಕಾಂಗ್ರೆಸ್‍ನ 15ಕ್ಕೂ ಹೆಚ್ಚು ಶಾಸಕರಿಗೆ ಕರೆ ಮಾಡಿ ಕಾಂಗ್ರೆಸ್‍ಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹೊಸಪೇಟೆ ವಿಜಯನಗರ ಕ್ಷೇತ್ರದ ಆನಂದ್‍ಸಿಂಗ್, ಬಳ್ಳಾರಿಯ ನಾಗೇಂದ್ರ, ಅಗರಿಬೊಮ್ಮನಹಳ್ಳಿ ಭೀಮಾನಾಯಕ್, ಸಂಡೂರಿನ ಇ.ತುಕಾರಾಮ್, ಕಂಪ್ಲಿಯ ಜೆ.ಎನ್.ಗಣೇಶ್, ಹೂವಿನ ಹಡಗಲಿಯ ಪಿ.ಟಿ.ಪರಮೆಶ್ವರ್‍ನಾಯಕ್ ಅವರುಗಳನ್ನು ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಸಂಪರ್ಕಿಸುತ್ತಿದ್ದು, ಬಿಜೆಪಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಆರು ಮಂದಿ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿ ವಹಿಸಿದೆ. ರಾತ್ರೋರಾತ್ರಿ ಕಾರ್ಯಾಚರಣೆಗಿಳಿದ ಡಿ.ಕೆ.ಶಿವಕುಮಾರ್ ಅವರು ಬಳ್ಳಾರಿಯ ಅಷ್ಟೂ ಶಾಸಕರನ್ನು ತಮ್ಮ ಸಂಪರ್ಕಕ್ಕೆ ತೆಗೆದುಕೊಂಡು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇನ್ನು ಬೀದರ್ ಜಿಲ್ಲೆಯ ಹುಮ್ನಾಬಾದ್‍ನ ರಾಜಶೇಖರ್‍ಪಾಟೀಲ್, ಬಾಲ್ಕಿಯ ಈಶ್ವರ್ ಖಂಡ್ರೆ, ಗುಲ್ಬರ್ಗಾ ಜಿಲ್ಲೆ ಅಫ್ಜಲ್‍ಪುರದ ಎಂ.ವೈ.ಪಾಟೀಲ್, ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿಯ ಶಿವಾನಂದ ಪಾಟೀಲ್, ಇಂಡಿ ಕ್ಷೇತ್ರದ ಯಶವಂತರಾಯಗೌಡ ಪಾಟೀಲ್, ಬೆಳಗಾವಿ ಜಿಲ್ಲೆ ಅಥಣಿಯ ಮಹೇಶ್ ಕುಮಟಳ್ಳಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಅಮರೇಗೌಡ ಬೈಯ್ಯಾಪುರ , ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ್, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಶಿವರಾಂ ಹೆಬ್ಬಾರ್, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬಿ.ಕೆ.ಸಂಗಮೇಶ್ವರ್, ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೆಂಕಟರವಣಪ್ಪ, ಚಿಕ್ಕಬಳ್ಳಾಪುರ ಜಿಲ್ಲೆಯ ಡಾ.ಕೆ.ಸುಧಾಕರ್, ಬಾಗೇಪಲ್ಲಿ ಕ್ಷೇತ್ರದ ಎಸ್.ಎನ್..ಸುಬ್ಬಾರೆಡ್ಡಿ, ಶಿಡ್ಲಘಟ್ಟದ ವಿ.ಮುನಿಯಪ್ಪ, ಚಾಮರಾಜನಗರ ಹನೂರು ಕ್ಷೇತ್ರದ ಆರ್.ನರೇಂದ್ರ ಮತ್ತಿತರರನ್ನು ಬಿಜೆಪಿ ನಾಯಕರು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದ್ದು, ಪಂಜಾಬ್ ಹಾಗೂ ಆಂಧ್ರಪ್ರದೇಶ ರಾಜ್ಯಗಳ ವಿವಿಧ ರೆಸಾರ್ಟ್‍ಗಳಿಗೆ ಕರೆದೊಯ್ಯುವ ಯೋಜನೆ ರೂಪಿಸಿದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ