ಬಿಜೆಪಿಯಿಂದ ಪ್ರಜಾಪ್ರಭುತ್ವ ಹೈಜಾಕ್- ದಿನೇಶ್ ಗುಂಡೂರಾವ್

ಬೆಂಗಳೂರು, ಮೇ 16-ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಮಾಡುವ ಮೂಲಕ ಬಿಜೆಪಿ ಹೇಸಿಗೆ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ನಿನ್ನೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿಯವರು ಹೇಳಿಕೆ ನೀಡಿ ಕರ್ನಾಟಕದಲ್ಲಿ ಬೇರೆ ಯಾರಿಗೆ ಅಧಿಕಾರ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಪ್ರಜಾಪ್ರಭುತ್ವವನ್ನೇ ಹೈಜಾಕ್ ಮಾಡುವ ದುರಂತ ಬೆಳವಣಿಗೆ. ರಾಜ್ಯದಲ್ಲಿ ಜನ ಕಾಂಗ್ರೆಸ್‍ಗೆ ಶೇ.38ರಷ್ಟು ಮತ ಹಾಕಿದ್ದಾರೆ. ಬಿಜೆಪಿಗೆ ಶೇ.36ರಷ್ಟು ಮತಗಳು ಬಂದಿವೆ. ಬಿಜೆಪಿಗಿಂತಲೂ ಕಾಂಗ್ರೆಸ್‍ಗೆ ಹೆಚ್ಚಿನ ಜನ ಮತ ಹಾಕಿದ್ದಾರೆ. ಜೆಡಿಎಸ್‍ಗೆ ಶೇ.18ರಷ್ಟು ಮತ ಬಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದರೆ ಶೇ.65 ರಷ್ಟು ಜನಮತ ಒಟ್ಟಾಗುತ್ತದೆ. ಬಿಜೆಪಿಯು ಶೇ.36ರಷ್ಟು ಮತ ಗಳಿಸಿರುವುದೇ ಬಹುಮತ ಎನ್ನುವುದಾದರೆ ಶೇ.65ರಷ್ಟು ಮತಗಳಿಸಿರುವ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ಬಹುಮತವಲ್ಲವೇ ಇದನ್ನು ನಿರಾಕರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ನಿಜ. ಆದರೆ ಅದು ಯಶಸ್ವಿಯಾಗುವುದಿಲ್ಲ. ಈ ಮೊದಲು ಮಿಜೋರಾಂ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಗೆದ್ದರೂ ಬಿಜೆಪಿ ಅನ್ಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ. ಅದನ್ನೆಲ್ಲ ಮರೆತು ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯನ್ನು ಜನಾದೇಶದ ವಿರುದ್ಧ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಪಾಲರ ನಿರ್ಣಯವನ್ನು ಕಾದು ನೋಡುತ್ತಿದ್ದೇವೆ. ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗುವುದರಿಂದ ಬಹುಮತಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯಾಬಲ ನಮ್ಮ ಬಳಿ ಯಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಮೊದಲು ಆದ್ಯತೆ ನೀಡಬೇಕು. ನೀಡುತ್ತಾರೆಂಬ ವಿಶ್ವಾಸವಿದೆ, ಒಂದು ವೇಳೆ ನೀಡದೆ ಹೋದರೆ ಅನಂತರ ಶಾಸಕರ ಸಭೆಯಲ್ಲಿ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ