
ಬೆಂಗಳೂರು, ಮೇ 16-ಕಾಂಗ್ರೆಸ್ ಸೋಲಿನ ನಂತರವೂ ಅಧಿಕಾರದ ಅವಕಾಶಗಳು ಹುಡುಕಿಕೊಂಡು ಬಂದಿದ್ದು, ಈ ಹಂತದಲ್ಲಿ ಅಧಿಕಾರ ಹಂಚಿಕೆಯ ರಾಜೀಸೂತ್ರಗಳು ಸ್ವೇಚ್ಛವಾಗಿ ನಡೆಯುತ್ತಿವೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಪರಮೇಶ್ವರ್ ಉಪಮುಖ್ಯಮಂತ್ರಿಯಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯ ಆಕಾಂಕ್ಷಿಯಾಗಿದ್ದು, ಪರಮೇಶ್ವರ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.
ಕಳೆದ 5 ವರ್ಷದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿ ನೀಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಹೇಳಲಾಗಿದೆ.ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಅನುಭವಿಸಿರುವುದರಿಂದ ಮೈತ್ರಿ ಸರ್ಕಾರದಲ್ಲಿ ಅವರಿಗೆ ಸರಿಸಮಾನವಾದ ಹುದ್ದೆ ಇಲ್ಲದಂತಾಗುತ್ತದೆ. ಹೀಗಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಿ ರಾಷ್ಟ್ರ ರಾಜಕಾರಣದತ್ತ ಮುಖ ಮಾಡುವ ಇಂಗಿತವನ್ನು ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಡಿ.ಕೆ.ಶಿವಕುಮಾರ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಅಧಿಕಾರ ಹಂಚಿಕೆಯ ಸೂತ್ರ ಭರ್ಜರಿಯಾಗಿ ಸಾಗಿದೆ.
2013ರ ಚುನಾವಣೆಯಲ್ಲಿ ಸೋಲು ಕಂಡು ಮುಖ್ಯಮಂತ್ರಿ ಹುದ್ದೆಯನ್ನು ಕೂದಲೆಳೆ ಅಂತರದಲ್ಲಿ ಕಳೆದುಕೊಂಡ ಪರಮೇಶ್ವರ್ ಅವರು ಈ ಬಾರಿ ಅಧಿಕಾರವನ್ನು ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಹೀಗಾಗಿ ಕಾಂಗ್ರೆಸ್ನಲ್ಲಿ ಒಳರಾಜಕೀಯಗಳ ಮೇಲಾಟ ತೀವ್ರವಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಬ್ ನಬಿ ಆಜಾದ್ ಪ್ರಮುಖ ನಾಯಕರ ಜೊತೆ ಇಂದು ಸುದೀರ್ಘ ಮಾತುಕತೆ ನಡೆಸಿ ಅಧಿಕಾರ ಹಂಚಿಕೆ ಸೂತ್ರವನ್ನು ಸರಳಗೊಳಿಸುವ ಪ್ರಯತ್ನ ನಡೆಸಿದರು.