ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಪ್ರಮುಖ ಸೂತ್ರಧಾರಿ

ಬೆಂಗಳೂರು, ಮೇ 16-ರಾಜ್ಯ ರಾಜಕಾರಣದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ರಾಜ್ಯಸಭೆ ವಿರೋಧಪಕ್ಷದ ನಾಯಕ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುಲಾಬ್‍ನಬಿ ಆಜಾದ್, ಪಂಜಾಬ್‍ನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಮುಖ ಸೂತ್ರಧಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಕಳೆದ ಎರಡೂವರೆ ವರ್ಷದಿಂದಲೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುವ ಮುನ್ನಾ ದಿನ ಹೈಕಮಾಂಡ್ ರಾಜ್ಯ ರಾಜಕಾರಣವನ್ನು ಹಳಿ ತಪ್ಪಲು ಬಿಡದೆ ನಿಯಂತ್ರಿಸಲು ಕಾಂಗ್ರೆಸ್‍ನ ಮಾಸ್ಟರ್ ಮೈಂಡ್ ಗುಲಾಮ್ ನಬಿ ಆಜಾದ್ ಅವರನ್ನು ಕಣಕ್ಕಿಳಿಸಿತ್ತು

ಬೆಂಗಳೂರಿಗೆ ಆಗಮಿಸಿದ ಗುಲಾಮ್ ನಬಿ ಆಜಾದ್ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದರು. ಹಾಗಾಗಿ ಮಧ್ಯಾಹ್ನದ ವೇಳೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಸ್ಪಷ್ಟ ಚಿತ್ರಣ ಹೊರಬಿತ್ತು.

ಆನಂತರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಅಧಿಕಾರ ಹಂಚಿಕೆ ಸಂಬಂಧ ಸುದೀರ್ಘ ಚರ್ಚೆ ನಡೆದಿತ್ತು. ಜೆಡಿಎಸ್‍ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದ್ದು, ಕಾಂಗ್ರೆಸ್ ಕನಿಷ್ಠ 20 ಸಚಿವ ಸ್ಥಾನಗಳಿಗೆ ಬೇಡಿಕೆ ಇಡಬೇಕೆಂಬ ಚರ್ಚೆಗಳು ನಡೆದವು. ಮುಂದಿನ ದಿನಗಳಲ್ಲಿ ಶೇ.60-40ರ ಸೂತ್ರದಲ್ಲಿ ಅಧಿಕಾರ ಹಂಚಿಕೆಯಾಗಬೇಕೆಂಬ ಬೇಡಿಕೆ ಕಾಂಗ್ರೆಸ್ ಪಾಳಯದ್ದಾಗಿದೆ.

ನಿಗಮ ಮಂಡಳಿ ನೇಮಕಾತಿಯಲ್ಲಿ ಶೇ.60ರಷ್ಟು ಸ್ಥಾನ ಬಿಟ್ಟುಕೊಡಬೇಕು. ಖಾತೆ ಹಂಚಿಕೆ ವಿಷಯದಲ್ಲಿ ಪರಸ್ಪರ ಮಾತುಕತೆ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ವಿರೋಧಪಕ್ಷಗಳ ನಡುವೆ ಮಾತುಕತೆಗೆ ಸಮನ್ವಯ ಸಮಿತಿ ರಚಿಸಬೇಕು ಎಂಬ ಚರ್ಚೆಗಳು ನಡೆದಿವೆ.

ಕಾಂಗ್ರೆಸ್‍ನ ಆರೇಳು ಮಂದಿ ಪ್ರಮುಖ ಶಾಸಕರು ಗೈರು ಹಾಜರಾಗಿರುವ ನಡುವೆಯೂ ಕಾಂಗ್ರೆಸ್ ಸರ್ಕಾರ ರಚಿಸುವ ನಿರೀಕ್ಷೆ ಹೊಂದಿದೆ. ಆದರೆ ಬಿಜೆಪಿ ತನ್ನದೇ ಆದ ತಂತ್ರಗಾರಿಕೆ ಮೂಲಕ ಕಾಂಗ್ರೆಸ್‍ನ್ನು ಅಧಿಕಾರದಿಂದ ದೂರವಿಡುವ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ ರಾಜಕಾರಣದಲ್ಲಿ ರಾಜ್ಯಪಾಲರ ನಿರ್ಣಯ ಅತ್ಯಂತ ಮಹತ್ವದ್ದಾಗಿದ್ದು, ಅದರ ಆಧಾರದ ಮೇಲೆ ಮತ್ತಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

ಈ ಎಲ್ಲಾ ಬೆಳವಣಿಗೆಗಳ ಉಸ್ತುವಾರಿ ನೋಡಿಕೊಳ್ಳಲು ಹೈಕಮಾಂಡ್ ಗುಲಾಮ್‍ನಬಿ ಆಜಾದ್ ಅವರಿಗೆ ಅಧಿಕಾರ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ