ಬಿಜೆಪಿಗೆ ಗ್ರಿನ್ ಸಿಗ್ನಲ್ ನೀಡಿದ ರಾಜ್ಯಪಾಲರು,: ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

ಬೆಂಗಳೂರು ಮೇ 16: ನಾಳೆ ಬೆಳಗ್ಗೆ 9.00ಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಿ ನಾಳೆ ಪ್ರಮಾಣ ವಚನ ಬೋದಿಸುವ ಮುನ್ನಾ ರಾಜ್ಯಪಾಲರು ಹಿರಿಯ ಕಾನೂನು ತಜ್ಞರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಸುಪ್ರೀಂಕೋರ್ಟ್‍ನ ಹಿರಿಯ ವಕೀಲರು ರಾಜ್ಯಪಾಲರಿಗೆ ಕಾನೂನಿನ ಸಾಧಕ ಭಾದಕಗಳ ಬಗ್ಗೆ ವಿವರಣೆ ನೀಡಿದ್ದಾರೆ. ಅದರ ಆಧಾರದ ಮೇಲೆ ರಾಜ್ಯಪಾಲರು ಅಂತಿಮವಾಗಿ ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದಾರೆ.
ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಹುಮತ ಸಾಬೀತಿನ ನಂತರ ತಮ್ಮ ಮಂತ್ರಿಮಂಡಲ ರಚಿಸಲಿದ್ದಾರೆ ಎಂದು ರಾತ್ರಿ 9.30ಕ್ಕೆ ಗಂಟೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಳೀಧರರಾವ್ ಘೋಷಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು.

ಚುನಾವಣಾ ಪೂರ್ವ ಮೈತ್ರಿಯಲ್ಲದ ಮತ್ತು ಏಕೈಕ ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿರುವುದು ಸುಪ್ರೀಂಕೋರ್ಟ್‍ನ ಸ್ಪಷ್ಟ ನಿರ್ದೇಶನದಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜಭವನದ ಆಹ್ವಾನವನ್ನು ಸ್ವಾಗತಿಸಿದರು.

ಇದೇ ವೇಳೆ ಅಪವಿತ್ರ ಮೈತ್ರಿ ಮೂಲಕ ಬಿಜೆಪಿ ವಿರುದ್ಧ ನಿಂತಿರುವ ಕಾಂಗ್ರೆಸ್ ಜೆಡಿಎಸ್ ಇಡೀ ರಾಜ್ಯದ ಜನಾದೇಶದ ವಿರುದ್ಧ ನಿಂತಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನಾ ಜೆಡಿಎಸ್-ಕಾಂಗ್ರೆಸ್‍ನ ನಾಯಕರು ತಮ್ಮ ಶಾಸಕರ ಜೊತೆ ರಾಜ್ಯಪಾಲರನ್ನು ಭೇಟಿ ಮಾಡಲು ಕಾಲವಕಾಶ ಕೇಳಿದ್ದರು. ಅದಕ್ಕೆ ರಾಜ್ಯಪಾಲರು ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿ ಜೆಡಿಎಸ್‍ನ ಕಾರ್ಯಕರ್ತರು ರಾಜಭವನದ ಎದುರು ಪ್ರತಿಭಟನೆ ನಡೆಸಿದ ಹೈಡ್ರಾಮವೂ ನಡೆಯಿತು.

ಕೊನೆಗೆ ಎರಡು ಪಕ್ಷಗಳ ಮುಖಂಡರು ಪ್ರತ್ಯೇಕವಾಗಿ ಭೇಟಿ ಮಾಡಲು ಅವಕಾಶ ನೀಡಿದರು. ಅದರಂತೆ ಕಾಂಗ್ರೆಸ್‍ನಿಂದ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿದರು. ಈ ವೇಳೆ ರಾಣೆಬೆನ್ನೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಪಕ್ಷೇತರ ಶಾಸಕ ಆರ್.ಶಂಕರ್ ಕಾಂಗ್ರೆಸ್ ನಿಯೋಗದೊಂದಿಗೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.

ನಂತರ ಜೆಡಿಎಸ್‍ನ ಕುಮಾರಸ್ವಾಮಿ ನೇತೃತ್ವದ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಜೆಡಿಎಸ್‍ಗೆ ಬೆಂಬಲ ನೀಡಲು ಶಾಸಕರು ಸಹಿ ಮಾಡಿದ್ದ ಪತ್ರಗಳನ್ನು ಎರಡು ಪಕ್ಷಗಳ ನಾಯಕರು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದರು. ಹಿಂದೆ ಇದೇ ರೀತಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಆಗ ರಾಜ್ಯಪಾಲರು ಮೈತ್ರಿ ಪಕ್ಷಗಳ ಶಾಸಕರ ಸಂಖ್ಯಾಬಲ ಪರೀಕ್ಷೆಗೆ ಅವಕಾಶ ನೀಡಿದ್ದರು.

ಎರಡು ಪಕ್ಷಗಳ ಶಾಸಕರು ರಾಜ್ಯಪಾಲರ ಮುಂದೆ ಪೆರೆಡ್ ನಡೆಸಿದ್ದರು. ಜೊತೆ ಶಾಸಕರು ನೀಡಿದ್ದ ಪ್ರಮಾಣ ಪತ್ರಗಳ ಸಹಿಗಳನ್ನು ಖುದ್ದು ಪರೀಕ್ಷೆ ನಡೆಸಿದ್ದರು. 2006 ಮತ್ತು 2008ರಲ್ಲಿ ಈ ರೀತಿ ನಡೆದಿತ್ತು. ಈಗ ರಾಜ್ಯಪಾಲ ವಜುಬಾಯಿ ವಾಲ ಹಿಂದಿನ ಪದ್ಧತಿಯನ್ನೇ ಅನುಸರಿಸಬೇಕು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್‍ನ ಶಾಸಕರು ಮನವಿ ಮಾಡಿದ್ದರು. ಆದರೆ ರಾಜ್ಯಪಾಲರು ಇದ್ಯಾವುದನ್ನು ಲೆಕ್ಕಿಸದೆ ಬಿಜೆಪಿಯ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅನುಮತಿ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ