ತಾನು ಕಳ್ಳ ಪರರನ್ನು ನಂಬ

ಬೆಂಗಳೂರು, ಮೇ 16- ರಾಜ್ಯ ರಾಜಕೀಯ ಪರಿಸ್ಥಿತಿಯಲ್ಲಿ ತಾನು ಕಳ್ಳ ಪರರನ್ನು ನಂಬ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಶತಾಯಗತಾಯ ಸರ್ಕಾರ ರಚಿಸಲೇ ಬೇಕು ಎಂದು ಮೂರು ಪಕ್ಷಗಳು ಹಠಕ್ಕೆ ಬಿದ್ದಿವೆ. ಹಿಗಾಗಿ ಮೂರು ಪಕ್ಷಗಳು ಪರಸ್ಪರ ಕುದುರೆ ವ್ಯಾಪಾರದಲ್ಲಿ ತೊಡಗಿವೆ.
104 ಸ್ಥಾನ ಗಳಿಸಿರುವ ಬಿಜೆಪಿ ತನಗೆ ಅಗತ್ಯ ಇರುವ ಇನ್ನೂ 9 ಸ್ಥಾನಗಳನ್ನು ತುಂಬಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಆಪರೆಷನ್ ಕಮಲ ಆರಂಭಿಸಿದೆ. ಎರಡು ಪಕ್ಷಗಳಲ್ಲಿರುವ ಲಿಂಗಾಯಿತ ಹಾಗೂ ಇತರ ಸಮುದಾಯಗಳ ಶಾಸಕರನ್ನು ಸೆಳೆಯಲು ಮುಂದಾಗಿದೆ.
ಇನ್ನೂ ಜೆಡಿಎಸ್ ಕೂಡ ಕೈ ಕಟ್ಟಿ ಕೂರದೆ ಬಿಜೆಪಿಯಲ್ಲಿರುವ ಒಕ್ಕಲಿಗ ಶಾಸಕರನ್ನು ಸೆಳೆಯಲು ಕಾರ್ಯಾಚರಣೆಗಿಳಿದಿದೆ. ಕಾಂಗ್ರೆಸ್ ನಾಯಕರು ಕೂಡ ಕಾರ್ಯಚರಣೆಗಿಳಿದಿದ್ದು, ಬಿಜೆಪಿಲ್ಲಿರುವ ಅಹಿಂದ ನಾಯಕರನ್ನು ಸೆಳೆಯಲು ಕಸರತ್ತು ಆರಂಭವಾಗಿದೆ. ಇಲ್ಲಿ ಪಕ್ಷಾಂತರ ಕಾಯ್ದೆಯ ಭಯ ಎಲ್ಲರನ್ನೂ ಕಾಡುತ್ತಿದ್ದು, ಯಾವ ರೀತಿ ಆಪರೆಷನ್ ನಡೆಸಬೇಕು ಎಂಬ ಗೊಂದಲಗಳಿವೆ.

ಮೂಲಗಳ ಪ್ರಕಾರ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವೇ ಆಯ್ಕೆಯಾದವರಿಗೆ ಶಾಸಕ ಸ್ಥಾನ ಲಭ್ಯವಾಗಲಿದೆ. ವಿಧಾನಸಭೆಯಲ್ಲಿ ಹಂಗಾಮಿ ಸಭಾಧ್ಯಕ್ಷರ ಮುಂದೆ ಪ್ರಮಾನ ವಚನ ಸ್ವೀಕರಿಸಬೇಕಿದೆ. ಅನಂತರ ನಡೆಯುವ ಸದನದಲ್ಲಿ ಭಾಗವಹಿಸಿ ವಿಶ್ವಾಸ ಮತ ಯಾಚನೆಯಲ್ಲಿ ಬೆಂಬಲ ನೀಡಬೇಕಿದೆ.

ಇಲ್ಲಿರುವ ತಾಂತ್ರಿಕ ಸಮಸ್ಯೆಯೆಂದರೆ ಕಲಾಪದಲ್ಲಿ ಹಾಜರಾದರೆ ವಿಪ್ ಸೂಚನೆಯಾಧರಿಸಿ ತಾವು ಗೆದ್ದು ಬಂದಿರುವ ಪಕ್ಷಕ್ಕೆ ಬೆಂಬಲ ನೀಡಲೇಬೇಕಿದೆ. ಅದಕ್ಕಾಗಿ ಪ್ರಮಾಣ ವಚನ ಸ್ವೀಕರಿಸಿ ಸದನದಲ್ಲಿ ಭಾಗವಹಿಸದೆ ಶಾಸಕರು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ. ಅನಂತರ ವಿಶ್ವಾಸ ಮತಯಾಚನೆಗೆ ಗೈರು ಹಾಜರಾದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾಗವುದು ಎಂಬ ಯೋಜನೆ ಸಿದ್ದವಾಗಿದೆ.

ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ