ವಿದ್ಯುತ್ ದರ ಹೆಚ್ಚಳಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆಗಳ ಮಹಾಸಂಸ್ಥೆ ಅಸಮಾಧಾನ

ಬೆಂಗಳೂರು, ಮೇ 15-ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‍ಸಿ) ಕೈಗಾರಿಕೆ ಬಳಕೆಯ
ವಿದ್ಯುತ್ ದರವನ್ನು ಹೆಚ್ಚಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯ
ಮತ್ತು ಕೈಗಾರಿಕೆಗಳ ಮಹಾಸಂಸ್ಥೆ(ಎïಕೆಸಿಸಿಐ), ಇದರಿಂದ ಉದ್ಯಮದ ಮೇಲೆ ಭಾರೀ ಹೊರೆ ಬೀಳಲಿದೆ
ಎಂದು ಆತಂಕ ವ್ಯಕ್ತಪಡಿಸಿದೆ.

ಬೆಸ್ಕಾಂಗೆ ಪ್ರತಿ ಯೂನಿಟ್‍ಗೆ 38 ಪೈಸೆಗಳು ಹಾಗೂ ಇತರ ಎಸ್ಕಾಂಗಳಿಗೆ ಪ್ರತಿ ಯೂನಿಟ್‍ಗೆ
30 ಪೈಸೆಗಳಷ್ಟು ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆಗಳಿಗೆ ತುಂಬಾ ಹೊರೆಯಾಗಲಿದೆ ಎಂದು
ಎïಕೆಸಿಸಿ ಅಧ್ಯಕ್ಷ ಕೆ.ರವಿ ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ಧಾರೆ.
ತಯಾರಿಕೆ ಮತ್ತು ಸೇವಾ ವಲಯ ಉದ್ದಿಮೆಗಳನ್ನು ಆಯೋಗವು ಪರಿಗಣಿಸಿಲ್ಲ. ಇವೆರಡೂ ಒಳಗೊಂಡಿರುವ
ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ (ಎಂಎಸ್‍ಎಂಇಗಳು) ಪ್ರತ್ಯೇಕ ವರ್ಗ ರಚಿಸಬೇಕು
ಎಂದು ಅವರು ಮನವಿ ಮಾಡಿದ್ದಾರೆ.

ಅಧಿಕ ವಿದ್ಯುತ್ ದರದಿಂದ ಎಂಎಸ್‍ಎಂಇಗಳ ತಯಾರಿಕಾ ಘಟಕಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.
ಎಂಎಸ್‍ಎಂಇಗಳ ಅಡಿ ಬರುವ ಸೇವಾ ಚಟುವಟಿಕೆಗಳು ವಾಣಿಜ್ಯ ವರ್ಗದ ವ್ಯಾಪ್ತಿಗೆ ಒಳಪಡುತ್ತವೆ
ಹಾಗೂ ಇಂಧನ ವೆಚ್ಚವು ಇವುಗಳ ಕಾರ್ಯನಿರ್ವಹಣೆಗೆ ಅಧಿಕ ಹೊರೆಯಾಗುತ್ತದೆ ಎಂದು ಅವರು
ಹೇಳಿದ್ಧಾರೆ.

ವಿದ್ಯುತ್ ಬಳಕೆ ಹೆಚ್ಚಾಗಿರದ ಅವಧಿ (ನಾನ್-ಪೀಕ್ ಅವರ್) ವೇಳೆ ಹೆಚ್‍ಟಿ ಗ್ರಾಹಕರಿಗಾಗಿ
ವಿಶೇಷ ಪ್ರೇರಕ ಯೋಜನೆಯನ್ನು ಕೆಇಆರ್‍ಸಿ ಘೋಷಿಸಿರುವುದನ್ನು ಕೆ.ರವಿ ಸ್ವಾಗತಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ